ಸಾರ್ವಜನಿಕ ಸಮಸ್ಯೆ ಪರಿಹಾರ ಶಾಸಕಾಂಗ ಕರ್ತವ್ಯ: ಮಂತರ್ ಗೌಡ

KannadaprabhaNewsNetwork | Published : Jul 14, 2024 1:31 AM

ಸಾರಾಂಶ

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ‘ಜನಸ್ಪಂದನ ಸಭೆ’ ನಡೆಯಿತು. ಶಾಸಕ ಮಂತರ್‌ ಗವಡ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕಾರ್ಯಾಂಗದ ಮೂಲಕ‌ ಪರಿಹರಿಸುವುದು ಶಾಸಕಾಂಗದ ಕರ್ತವ್ಯ ಆಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ‘ಜನಸ್ಪಂದನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಶನಿವಾರ ನಡೆದ ‘ಜನಸ್ಪಂದನ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಲೋಕೋಪಯೋಗಿ, ಸೆಸ್ಕ್, ಆರೋಗ್ಯ, ಶಿಕ್ಷಣ, ಪೌರಾಡಳಿತ, ಗಣಿ... ಹೀಗೆ ಹಲವು ಇಲಾಖೆ ವ್ಯಾಪ್ತಿಯ ಕೆಲಸ-ಕಾರ್ಯಗಳಿಗೆ ಸಾರ್ವಜನಿಕರಿಂದ ಪ್ರತಿನಿತ್ಯ ಹೆಚ್ಚಿನ ಮನವಿ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸಲ್ಲಿಕೆಯಾದ ಅರ್ಜಿಗೆ ಮಾತ್ರ ಸೀಮಿತವಾಗದೆ, ಸ್ಥಳೀಯ ಎಲ್ಲ ರೀತಿಯ ಸಮಸ್ಯೆ ಬಗೆಹರಿಸುವುದು ಅತಿಮುಖ್ಯ ಎಂದು ಡಾ.ಮಂತರ್ ಗೌಡ ಪ್ರತಿಪಾದಿಸಿದರು.ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ಇಂದು ಬಂದಿಲ್ಲ, ನಾಳೆ ಬನ್ನಿ, ನೋಡುತ್ತೇವೆ, ಮಾಡಿಕೊಡುತ್ತೇವೆ ಎಂಬ ಸಬೂಬುಗಳು ಬೇಡ, ಕೆಲಸ ಆಗುವುದಿದ್ದಲ್ಲಿ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಆಗುವುದಿಲ್ಲ ಎಂದು ಹಿಂಬರಹ ನೀಡಬೇಕು. ಪ್ರತಿ ಕ್ಷೇತ್ರದಲ್ಲಿ ಪಾರದರ್ಶಕತೆ ಇರಬೇಕು. ಆ ದಿಸೆಯಲ್ಲಿ ಸಾರ್ವಜನಿಕರಿಗೆ ಸ್ಪಂದನೆ ಮುಖ್ಯ ಎಂದು ಶಾಸಕರು ನುಡಿದರು.ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸಹ ಒಂದು ಬಗೆಹರಿದಲ್ಲಿ, ಮತ್ತೊಂದು ಸಮಸ್ಯೆಗಳು ಉದ್ಬವ ಆಗುತ್ತವೆ. ಆದ್ದರಿಂದ ಭಾರತವು ಮುಂದುವರಿಯುತ್ತಿರುವ ರಾಷ್ಟ್ರವಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಶ್ರಮವಹಿಸಬೇಕಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಸರ್ಕಾರದ ಹಲವು ಕಾರ್ಯಕ್ರಮವನ್ನು ಅರ್ಹರಿಗೆ ತಲುಪಿಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಡಿಪಿ ಸಮಿತಿ ಸದಸ್ಯರಾದ ಸುನಿತಾ, ತಹಸೀಲ್ದಾರ್‌ ಕಿರಣ್ ಗೌರಯ್ಯ, ನವೀನ್ ಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜನಸ್ಪಂದನ ಸಭೆ ಸಂದರ್ಭ ಶಾಸಕ ಡಾ.ಮಂತರ್ ಗೌಡ, ನಿವೇಶನ, ಮನೆ ಹಕ್ಕುಪತ್ರ ಹಾಗೂ ಪಿಂಚಣಿ ಪತ್ರವನ್ನು ಅರ್ಹರಿಗೆ ವಿತರಿಸಿದರು.

ನೂರಾರು ಮನವಿದಾರರು ಜನಸ್ಪಂದನ ಸಭೆಯಲ್ಲಿ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಿದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಸಾವದಾನದಿಂದ ಆಲಿಸಿದ ಡಾ.ಮಂತರ್ ಗೌಡ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು‌. ಕೆಲವು ಅರ್ಜಿಗಳಿಗೆ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿದರು.

Share this article