- ಹಂಗರವಳ್ಳಿಯಲ್ಲಿ ಆವತಿ ಹೋಬಳಿ ಮಟ್ಟದ ರೈತ ಸಮಾವೇಶ
ಸಮಸ್ಯೆ ಪರಿಹಾರ ಮಾಡುವಾಗ ಸಮಸ್ಯೆ ಸೃಷ್ಠಿ ಮಾಡುವವರೂ ಜೊತೆಗಿರಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಪರಿಹಾರವಾಗುವುದಿಲ್ಲ. ಮಲೆನಾಡಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಕೆಲವು ಕೇಂದ್ರ, ಇನ್ನು ಕೆಲವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಮುಂದಿನ ಪೀಳಿಗೆಗೆ ಇಲ್ಲಿನ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಹಂಗರವಳ್ಳಿಯಲ್ಲಿ ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಜಿಲ್ಲಾ ಬೆಳೆಗಾರರ ಸಂಘ, ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಆವತಿ ಹೋಬಳಿ ಮಟ್ಟದ ಬೃಹತ್ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದೆ ಬರಬೇಕಿದೆ. ಈ ವೇಳೆ ಕಾರ್ಯಾಂಗ ಹಾಗೂ ಶಾಸಕಾಂಗ ಎರಡರ ಉಪಸ್ಥಿತಿ ಇದ್ದಾಗ ನ್ಯಾಯಾಂಗವೂ ಸ್ವಲ್ಪ ಮಟ್ಟಿಗೆ ಸರಿ ಬರುತ್ತದೆ. ಆಗ ಸಾಮಾನ್ಯ ಬಡವ ನೊಬ್ಬ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರ ಎಂದರೆ ಯಾವುದೇ ಪಕ್ಷವಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳು ಸೇರಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇದು ತಳ ಮಟ್ಟದಿಂದಲೂ ಆಗಬೇಕು. ಜನಪ್ರತಿನಿಧಿಗಳು ಜನರಿಗಾಗಿ ಸ್ವಲ್ಪವಾದರೂ ಗಟ್ಟಿತನ ತೋರಬೇಕು ಎಂದು ಹೇಳಿದರು.
ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರಮಕ್ಕಿ ಮಹೇಶ್ ಮಾತನಾಡಿ, ಕಂದಾಯ ಮತ್ತು ಅರಣ್ಯ ಭೂಮಿ ಬೇರ್ಪಡಿಸದೆ ಇರುವ ಕಾರಣ ಪೋಡಿ ಮಾಡಲು ಸಮಸ್ಯೆ ತಲೆದೋರಿದೆ. ಜೊತೆಗೆ ಅನೇಕ ಕಂದಾಯ ಭೂಮಿ ಸಮಸ್ಯೆಗಳೂ ಇವೆ. ಅರಣ್ಯ ಭೂಮಿ ಡೀಮ್ಡ್ ಆಗಿ ಪರಿವರ್ತನೆಯಾಗಿದೆ. ಪರಿಭಾವಿತ ಅರಣ್ಯ, ಸೆಕ್ಷನ್ 4(1), ಈ ಸಮಸ್ಯೆಗಳ ಜೊತೆಗೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಮುಖಂಡರಾದ ಎಸ್.ವಿಜಯಕುಮಾರ್, ಡಿ.ಸಿ.ಅರುಣ್‌ಕುಮಾರ್, ಎಚ್.ಪಿ. ರಮೇಶ್, ಎಚ್.ಕೆ. ಜಗದೀಶ್, ಬಿ.ಇ. ನಾಗೇಶ್, ಎಚ್.ಜಿ. ಗಣೇಶ್, ಪ್ರದೀಪ್, ಸಚ್ಚಿದಾನಂದ, ಮೋಹನ್‌ಕುಮಾರ್, ಎಂ.ಎನ್ ಸುಜಾತ, ವಸಂತಮ್ಮ, ಎಚ್.ಬಿ ಸುರೇಶ್ ಇದ್ದರು.