ಸೋಮರಡ್ಡಿ ಅಳವಂಡಿ ಕೊಪ್ಪಳ
"ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ "ದಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ, ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮ ಖಾತೆ ತೆರೆದು ನಿವೇಶನಕ್ಕಾಗಿ ಫಲಾನುಭವಿಗಳು ಹಣ ಪಾವತಿ ಮಾಡಿರುವುದನ್ನು ನುಂಗಿ ನೀರು ಕುಡಿದಿದ್ದಾರೆ.ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದ ಮೇಲೆ ದ್ವಿತೀಯ ದರ್ಜೆಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಕುಮಾರ್ ಕರಾಮತ್ತು ಮಾಡಿ ನಿವೇಶನ ಕೋರಿ ಲಕ್ಷ ಲಕ್ಷ ಪಾವತಿಸಿದವರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಪ್ರಾಧಿಕಾರದಲ್ಲಿ ಕಳೆದ 15 ವರ್ಷಗಳಿಂದ ನಾನಾ ಅಕ್ರಮ ಎಸೆದು ಕೋಟಿ ಕೋಟಿ ಲೂಟಿ ಮಾಡಿರುವುದು ಈಗ ಬೆಳಕಿಗೆ ಬಂದಿದ್ದು, ಪ್ರಾಧಿಕಾರದ ಆಯುಕ್ತರದ ಶರಣಪ್ಪ ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ಚುರುಕುಗೊಂಡಿದೆ.
ಬೆಳಕಿಗೆ ಬಂದಿದ್ದು ಹೇಗೆ?: ಪ್ರಾಧಿಕಾರದಲ್ಲಿ ನಿವೇಶನಕ್ಕಾಗಿ ಫಲಾನುಭವಿಗಳು ಲಕ್ಷ ಲಕ್ಷ ಹಣ ನೀಡಿ ನಾಲ್ಕಾರು ವರ್ಷವಾದರೂ ನಿವೇಶನ ನೀಡದೇ ಇರುವುದರಿಂದ ಪ್ರಶ್ನೆ ಮಾಡಿ ಪ್ರಾಧಿಕಾರಕ್ಕೆ ಗಂಗಾವತಿ ಮಹಿಳೆಯರುಗಳು ಸೇರಿದಂತೆ ಅನೇಕರು ದೂರು ನೀಡಿದ್ದಾರೆ.ಹೀಗೆ, ದೂರು ನೀಡಿದ ಆಧಾರದ ಮೇಲೆ ಪರಿಶೀಲನೆ ಮಾಡಿದಾಗ ಪ್ರಾಧಿಕಾರದಲ್ಲಿ ಈ ಕುರಿತು ಯಾವುದೇ ಹಣ ಜಮೆ ಆಗಿರಲಿಲ್ಲ, ಇದರಿಂದ ಗಲಿಬಿಲಿಗೊಂಡ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ ದಾಖಲಾತಿ ತಡಕಾಡಿದರೆ ಎಲ್ಲಿಯೂ ನಯಾ ಪೈಸೆ ಜಮೆ ಆಗಿರಲಿಲ್ಲ. ಆಗ ದೂರಿನಲ್ಲಿ ಸಲ್ಲಿಸಿದ ಮಾಹಿತಿ ಅಡಿ ಯಾವ ಬ್ಯಾಂಕಿಗೆ ಹಣ ಜಮೆಯಾಗಿದೆ ಎನ್ನುವುದನ್ನು ಆಧರಿಸಿ ಬ್ಯಾಂಕಿನಲ್ಲಿ ಮಾಹಿತಿ ಪಡೆಯಲು ಮುಂದಾದಾಗ ಇದೆಲ್ಲವೂ ಬೆಳಕಿಗೆ ಬಂದಿದೆ.
ಹೀಗಾಗಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ಅಧಿಕೃತ 11 ಖಾತೆ ಸೇರಿದಂತೆ ತನ್ನ ಹೆಸರಿನಲ್ಲಿ ಇರುವ ಎಲ್ಲ ಖಾತೆಗಳನ್ನು ಪ್ರೀಜ್ ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದೆ.
ಎಂಟು ಕೋಟಿಗೂ ಅಧಿಕ ಲೂಟಿ: ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಕುಮಾರ್ ಹಾಗೂ ಈ ಹಿಂದೆ ಕಾರ್ಯ ನಿರ್ವಹಿಸಿದ ಆಯುಕ್ತರೊಬ್ಬರ ಸಹಕಾರದಿಂದ ಸುಮಾರು ಎಂಟು ಕೋಟಿ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಲೇಔಟ್‌ನಲ್ಲಿ ಇದ್ದ ನಿವೇಶನ ಲಾಟರಿ ಮೂಲಕ ಹಂಚಿದ ದಾಖಲೆ ಸೃಷ್ಟಿಸಿ ತಾವೇ ಸೃಷ್ಟಿಸಿದ ಬ್ಯಾಂಕ್ ಖಾತೆಗೆ ಫಲಾನುಭವಿಗಳಿಂದ ಲಕ್ಷ ಲಕ್ಷ ಜಮೆ ಮಾಡಿಕೊಳ್ಳಲಾಗಿದೆ. ಹೀಗೆ ಜಮೆ ಮಾಡಿಕೊಂಡ ಹಣ ಲೂಟಿ ಹೊಡೆಯಲು ಗುತ್ತಿಗೆ ನೌಕರ ಕರಾಮತ್ತಿನಿಂದ ಪ್ರಾಧಿಕಾರದ ಆಯುಕ್ತರ ರುಜು ತಾನೇ ಮಾಡಿಕೊಂಡು ತನ್ನ ಸ್ವಂತ ಬ್ಯಾಂಕ್ ಖಾತೆಗೆ ತನ್ನ ಪತ್ನಿಯ ಬ್ಯಾಂಕ್ ಖಾತೆಗೆ ಹಾಗೂ ತನ್ನ ಸಹೋದರನ ಬ್ಯಾಂಕ್ ಖಾತೆಗೆ ಕೋಟಿ ಕೋಟಿ ಹಣ ಜಮೆ ಮಾಡಿ ಕೊಂಡಿರುವುದು ಮೇಲ್ನೋಟಕ್ಕೆ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಇದಲ್ಲದೆ ಆಯುಕ್ತರು ಒಬ್ಬರ ಬ್ಯಾಂಕ್ ಖಾತೆಗೂ ಹಣ ಜಮೆಯಾಗಿರುವುದು ಗೊತ್ತಾಗಿದೆ.ಸರ್ಕಾರಿ ನೌಕರ: ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ರವೀಂದ್ರ ಕುಮಾರ್ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ಸರ್ಕಾರಿ ನೌಕರ ಎನ್ನುವಂತೆ ಬಿಂಬಿಸಿ ಮಾಡಬಾರದನ್ನೆಲ್ಲ ಮಾಡಿ ಲೂಟಿ ಮಾಡಿದ್ದಾನೆ. ಈ ಹಿಂದೆ ಈತನ ಅಕ್ರಮದ ಬಗ್ಗೆ ವಾಸನೆ ಬಂದಿದ್ದರಿಂದ ಈತನನ್ನು ಪ್ರಾಧಿಕಾರದಿಂದ ಬಿಡುಗಡೆ ಮಾಡಿದರೂ ಬೇರೆಡೆಗೆ ವರ್ಗಾವಣೆಯಾಗಿ ಹೋಗದೆ ಇದ್ದಾಗ ಈತ ಗುತ್ತಿಗೆ ನೌಕರ ಎಂದು ಗೊತ್ತಾಗಿದೆ. ಆದರೂ ಈತ ಪ್ರಭಾವ ಬಳಸಿ, ಮತ್ತೆ ಉಳಿದುಕೊಂಡಿದ್ದಾನೆ.
ದೂರು ದಾಖಲು, ನಾಪತ್ತೆ: ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಈತ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.ವಂಚನೆ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆ ದೂರು ದಾಖಲಾಗಿದೆ. ಅಕ್ರಮದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ ತಿಳಿಸಿದ್ದಾರೆ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಲ್ಲಿಸಿರುವ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದು, ಆರೋಪಿಯ ಪತ್ತೆ ಕಾರ್ಯ ನಡೆದಿದೆ ಎಂದು ಕೊಪ್ಪಳ ಎಸ್ಪಿ ಡಾ. ರಾಮ ಎಲ್ ಅರಸಿದ್ದಿ ತಿಳಿಸಿದ್ದಾರೆ.