ಸಾರ್ವಜನಿಕ ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ ಉತ್ತಮವಾಗಿದೆ: ಡಾ.ಜಿ.ಎಚ್.ಶ್ರೀಹರ್ಷ

KannadaprabhaNewsNetwork | Updated : Oct 29 2024, 12:52 AM IST

ಸಾರಾಂಶ

ತರೀಕೆರೆ, ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಪಟ್ಟಣದ ಅರುಣೋದಯ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ತಿಳಿಸಿದ್ದಾರೆ.

- ಅರುಣೋದಯ ಶಾಲೆಯಲ್ಲಿ ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಪಟ್ಟಣದ ಅರುಣೋದಯ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ತಿಳಿಸಿದ್ದಾರೆ.

ಪಟ್ಟಣದ ಅರುಣೋದಯ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಷಯದ ಸಂವಾದದಲ್ಲಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಕಸದ ತೊಟ್ಟಿಗಳನ್ನು ತೆರವುಗೊಳಿಸಿದ್ದು ತರೀಕೆರೆ ಪುರಸಭೆಯಿಂದ ಪ್ರತಿನಿತ್ಯ ಮನೆ ಕಸವನ್ನು ಕ್ರೂಢೀಕರಿಸುವ ವ್ಯವಸ್ಥೆ ಬಹಳ ಶಿಸ್ತುಬದ್ಧವಾಗಿ ನಡೆಯುತ್ತಿದೆ. ತರೀಕೆರೆ ಪಟ್ಟಣ ಸ್ವಚ್ಛ ಮತ್ತು ಆರೋಗ್ಯಕರವಾಗಿದ್ದು ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಅರುಣೋದಯ ಶಾಲೆಯಲ್ಲಿ ಮಕ್ಕಳ ಜನ್ಮದಿನದಂದು ಚಾಕ್ಲೇಟ್ ತರುವುದನ್ನು ನಿಷೇಧಿಸಿದೆ. ಬದಲಿಗೆ ಸ್ಥಳೀಯ ಮಿಠಾಯಿಗಳನ್ನು ಮಕ್ಕಳು ತರುತ್ತಿದ್ದು, ಶಾಲೆ ಪರಿಸರಕ್ಕೆ ಪ್ಲಾಸ್ಟಿಕ್ ಹೊರೆ ಯನ್ನು ತಗ್ಗಿಸಿರುವುದು ಮಕ್ಕಳ ಕೊಡುಗೆ ಎಂದ ಅವರು, ಮಾಲಿನ್ಯ ಕಡಿಮೆ ಮಾಡುವುದು ಮತ್ತು ಪರಿಸರ ಶುದ್ಧವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ತರೀಕೆರೆ ಪುರಸಭೆ ಸ್ವಚ್ಛತಾ ಮೇಲ್ವಿಚಾರಕ ಪ್ರಕಾಶ್ ಪಿ. ಮಾತನಾಡಿ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಮನೆ ಹಾಗು ಸುತ್ತಮುತ್ತಲಿನ ತ್ಯಾಜ್ಯವಸ್ತುಗಳ ಸಮರ್ಪಕ ನಿರ್ವಹಣೆ ಅತ್ಯಗತ್ಯ. ಕಳೆದ 15 ವರ್ಷಗಳಿಂದ ತರೀಕೆರೆ ಪಟ್ಟಣದ ಪುರಸಭೆ ಸ್ವಚ್ಛತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡು ಕೆಲಸ ನಿರ್ವಹಿಸುವ ಸಮಯದಲ್ಲಿ ಎದುರಿಸಿರುವ ಸವಾಲುಗಳನ್ನು ಮಕ್ಕಳಿಗೆ ತಿಳಿಸಿ ಮುಂದಿನ ದಿನಗಳಲ್ಲಿ ಮಕ್ಕಳ ಕುಟುಂಬದವರು ಪುರಸಭೆ ಸಿಬ್ಬಂದಿಯೊಡನೆ ಉತ್ತಮ ರೀತಿಯಲ್ಲಿ ಸಹಕರಿಸುವಂತೆ ಕೋರಿದರು.ಪಟ್ಟಣದಲ್ಲಿ ಸುಮಾರು 10 ಸಾವಿರ ಮನೆಗಳಿದ್ದು ಪ್ರತಿ ಮನೆಯವರೂ ಹಸಿ ಹಾಗು ಒಣ ಕಸವೆಂದು ಬೇರ್ಪಡಿಸಿ ನೀಡಿದಲ್ಲಿ ಪುರಸಭೆ ಸಿಬ್ಬಂದಿಗೆ ನೆರವಾಗುವುದು ಎಂದು ತಿಳಿಸಿದರು. ಪೌರಕಾರ್ಮಿಕರಾದ ಲಲಿತಮ್ಮ ಮಾತನಾಡಿ, ರಸ್ತೆ ಹಾಗೂ ಚರಂಡಿ ಸ್ವಚ್ಛತೆ ಕೆಲಸ ಮಾಡುತ್ತ ಬಾಯಾರಿಕೆ ಆದಾಗ ಪುರಸಭೆ ಪೌರಕಾರ್ಮಿಕರು ನೀರು ಕೇಳಿದಲ್ಲಿ ದಯಮಾಡಿ ಸಹಕರಿಸಬೇಕೆಂದು ಹೇಳಿದರು. ತರೀಕೆರೆ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ತಿಪ್ಪೇಶ್, ಗಂಗಣ್ಣ ಮತ್ತು ಪದ್ಮ ತಮ್ಮ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.ಸಂಸ್ಥೆ ಟ್ರಸ್ಟಿಗಳಾದ ಗೀತಾ ಶ್ರೀಹರ್ಷ, ಶಾಲೆ ಮುಖ್ಯೋಪಾಧ್ಯಾಯಿನಿ ಗೌರಮ್ಮ. ಜಿ.ಎಮ್. ಹಾಗೂ ಶಾಲಾ ಕೌನ್ಸಿಲ್ ಸದಸ್ಯರು ಪೌರಕಾರ್ಮಿಕರ ಸೇವೆ ಗುರುತಿಸಿ ಸನ್ಮಾನಿಸಿದರು. ಶಿಕ್ಷಕಿ ಹಿಮಂತಿನಿ ಶಿವಪ್ರಸಾದ್, ಶಿಲ್ಪ ಎಚ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಅರುಣೋದಯ ಪ್ರೌಢಶಾಲೆ ಮಕ್ಕಳು ಮತ್ತು ಶಿಕ್ಷಕರೆಲ್ಲರೂ ಸೇರಿ ಪಂಪಮಹಾಕವಿ ರಸ್ತೆಯನ್ನು ಈ ಕಾರ್ಯಕ್ರಮದ ಅಂಗವಾಗಿ ಸ್ವಚ್ಛಗೊಳಿಸಿದರು.28ಕೆಟಿಆರ್.ಕೆ.10ಃ

ತರೀಕೆರೆ ಅರುಣೋದಯ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಷಯದ ಸಂವಾದದಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ಮಾತನಾಡಿದರು. ತರೀಕೆರೆ ಪುರಸಭೆ ಸ್ವಚ್ಚತಾ ಮೇಲ್ವಿಚಾರಕ ಪ್ರಕಾಶ್ ಪಿ. ಮತ್ತಿತರರು ಇದ್ದರು.

Share this article