ಪ್ರಜಾಸೇವಾ ಆಂದೋಲನಕ್ಕೆ ಜನಸೇವೆ ಕಾರ್ಯಗತ: ಜಿಲ್ಲಾಧಿಕಾರಿ ಪೂವಿತಾ

KannadaprabhaNewsNetwork |  
Published : Nov 08, 2026, 01:15 AM IST
07ಕೆಪಿಆರ್ಸಿಆರ್ 01:  | Kannada Prabha

ಸಾರಾಂಶ

ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯನ್ನು ರೂಪಿಸಿ, ಪ್ರಜಾಸೇವಾ ಆಂದೋಲನದ ಮುಖಾಂತರ ಕಾರ್ಯಗತ ಗೊಳಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯನ್ನು ರೂಪಿಸಿ, ಪ್ರಜಾಸೇವಾ ಆಂದೋಲನದ ಮುಖಾಂತರ ಕಾರ್ಯಗತ ಗೊಳಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಜಿಲ್ಲೆಯ ದೇವದುರ್ಗ ಸಮೀಪದ ಅರಕೇರಾದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ವಿವಿಧ ಇಲಾಖೆಯಗಳ ಸಹಯೋಗ ದೊಂದಿಗೆ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಮಾತನಾಡಿದ ಅವರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಅಥವಾ ಸಕಾಲದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮಾತನಾಡಿ, ಸರ್ಕಾರದ ಸೇವೆಗಳನ್ನು ಸಾರ್ವಜನಿಕರ ಬಳಿಗೆ ತಲುಪಿಸುವ ಸದು ದ್ದೇಶದಿಂದ ಪ್ರಜಾಸೇವೆಯ ಆಂದೋಲನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವುದಾಗಿದೆ ಎಂದು ಹೇಳಿದರು. ಜಿಪಂ ಯೋಜನಾಧಿಕಾರಿ ಶರಣಬಸವ ,ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹಮದ್ ಅವರು ಮಾತನಾಡಿದರು.

ಬಾಲ್ಯವಿವಾಹ ನಿಷೇಧ ಪ್ರಜ್ಞಾವಿಧಿ: ಬಾಲ್ಯವಿವಾಹ ಮುಕ್ತ ಭಾರತ 100ದಿನಗಳ ಅಭಿಯಾನ ಅಂಗವಾಗಿ ದೇವದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ ಅವರಿಂದ ಬಾಲ್ಯ ವಿವಾಹ ನಿಷೇಧ ಪ್ರಜ್ಞೆ ವಿಧಿಯನ್ನು ಇದೇ ಸಂದರ್ಭದಲ್ಲಿ ಬೋಧಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ವಿವಿಧ ಮಳಿಗೆಗೆ ಚಾಲನೆ: ಅರಕೇರಾದ ನಡೆದ ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಇಲಾಖೆಯಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿದ್ದ ವಿವಿಧ ಮಳಿಗೆಗಳಿಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಚಾಲನೆ ನೀಡಿ, ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಅರಣ್ಯ ಅಧಿಕಾರಿ ಸುರೇಂದ್ರ ಬಾಬು, ಜಿಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಸೇರಿ ವಿವಿಧ ಇಲಾಖೆಗಳ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ, ಸಂಘಟನೆಗಳ ಪ್ರಮುಖರು, ಅರಕೇರಾ ಗ್ರಾಮಸ್ಥರು ಇದ್ದರು.

ಗ್ರಾಪಂ ಮಟ್ಟದಲ್ಲಿ ಅಭಿಯಾನ: ಈಗಾಗಲೇ ಬರಗಾಲ ಘೋಷಣೆಯಾಗಿರುವುದರಿಂದ ವಿ.ಬಿ .ಜಿ ರಾಮ್‌ಜಿ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 125 ದಿನಗಳ ಕೆಲಸವನ್ನು ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಕ್ಷನ್ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕಾಗಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಲಿಖಿತವಾಗಿ ಸಲ್ಲಿಸಬಹುದು ಎಂದು ಡಿಸಿ ತಿಳಿಸಿದರು.

ರಾಯಚೂರಲ್ಲೂ ಪ್ರಜಾಸೇವೆ ಆಂದೋಲನ: ರಾಯಚೂರು ತಾಲೂಕಿನ ದೇವನಪಳ್ಳಿ ಗ್ರಾಮದಲ್ಲಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಯಚೂರು ತಾಲೂಕಾಡಳಿತ, ತಾಪಂ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿವಿಧ ದೂರುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಈ ವೇಳೆ ತಹಸೀಲ್ದಾರ್ ಸುರೇಶ ವರ್ಮಾ,ತಾಪಂ ಇಒ ಚಂದ್ರಶೇಖರ ಪವಾರ್ ಸೇರಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ