ಸಿರುಗುಪ್ಪ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲ ಕಾರ್ಯಗಳಿಗೆ ನಿಯಮಾನುಸಾರವಾಗಿ ವಿಳಂಬವಾಗದಂತೆ ಗ್ರಾವೇಲ್ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಸೂಚಿಸಲಾಗಿದೆ. ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತಿಳಿಸಿದರು.ಅವರು ಗುರುವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಕಡತಗಳ ವಿಲೇವಾರಿ, ಸಾರ್ವಜನಿಕ ಸೇವೆಗಳು ಮತ್ತು ಕಚೇರಿಯ ವಿವಿಧ ವಿಭಾಗಗಳ ಕಾರ್ಯ ನಿರ್ವಹಣೆಯ ಕುರಿತು ಪರಿಶೀಲಿಸಿದರು. ಕಚೇರಿಯಲ್ಲಿ ಬಾಕಿ ಇರುವ ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆಗಳನ್ನು ಒದಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೆಟ್ಟಿಲ ಮೇಲೆ ಕುಳಿತವರ ವಿಚಾರಣೆ:
ಕಚೇರಿ ಮೇಲಿರುವ ಭೂಮಾಪನ ಇಲಾಖೆಯ ವೀಕ್ಷಣೆಗೆ ಹೋಗುವಾಗ ಮೆಟ್ಟಿಲ ಮೇಲೆ ಕುಳಿತ ಸಾರ್ವಜನಿಕರನ್ನು ವಿಚಾರಿಸಿದರು. ನಂತರ ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಕಚೇರಿಯ ಮುಂಭಾಗದಲ್ಲಿ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.ನಗರಸಭೆಯ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ತಹಶೀಲ್ದಾರ್ ಗೌಸಿಯಾಬೇಗಂ, ಪೌರಾಯುಕ್ತ ಗಂಗಾಧರ ಇದ್ದರು.