ಮನೆ ಮನೆ ಭೇಟಿ ವೇಳೆ ಪರಿಷ್ಕರಣೆಗೆ ಮತದಾರರು ಸಹಕರಿಸಿ: ವಿಶ್ವೇಶ್ವರ ಬದರಗಡೆ
ಜೂನ್ ೩೦ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗಲಿದ್ದು, ಒಂದು ತಿಂಗಳ ಕಾಲ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಿದ್ದು, ಈ ವಿಶೇಷ ಎಸ್‌ಐಆರ್ ಬಗ್ಗೆ ಮತದಾರರು ಆತಂಕಪಡುವ ಅಗತ್ಯವಿಲ್ಲ. ಮತಗಟ್ಟೆ ಅಧಿಕಾರಿಗಳು ನೀಡುವ ಗಣತಿ ನಮೂನೆಯನ್ನು ಮತದಾರರು ತಪ್ಪದೇ ಭರ್ತಿ ಮಾಡಿ ನೀಡಬೇಕೆಂದು ನಗರಸಭಾ ಆಯುಕ್ತ ವಿಶ್ವೇಶ್ವರ ಬದರಗಡೆ ತಿಳಿಸಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಈ ಪರಿಷ್ಕರಣೆ ಕಾರ್ಯದಲ್ಲಿ ತೊಡಗಲಿದ್ದಾರೆ. ಜೂನ್ ೨೦ರಿಂದ ೨೯ರವರೆಗೆ ತರಬೇತಿ, ಜೂನ್ ೩೦ ರಿಂದ ಜುಲೈ ೨೯ರವರೆಗೆ ಮತಗಟ್ಟೆ ಅಧಿಕಾರಿಗಳ ಮನೆಮನೆ ಭೇಟಿ, ಜುಲೈ ೨೯ರಂದು ಮತಗಟ್ಟೆಗಳ ಕ್ರಮಬದ್ಧಗೊಳಿಸುವಿಕೆ, ಆಗಸ್ಟ್ ೦೫ರಂದು ಮತದಾರರ ಕರಡುಪಟ್ಟಿ ಪ್ರಕಟ, ಆಗಸ್ಟ್ ೦೫ ರಿಂದ ಸೆಪ್ಟೆಂಬರ್ ೦೪ರವರೆಗೆ ಆಕ್ಷೇಪಣೆಗಳಿಗೆ ಅವಕಾಶ, ಆಗಸ್ಟ್ ೦೫ರಿಂದ ಅಕ್ಟೋಬರ್ ೦೩ರವರೆಗೆ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಹಾಗೂ ಅಕ್ಟೋಬರ್ ೦೭ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.ಜೂನ್ ೩೦ರಿಂದ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಮಾಹಿತಿಯ ಗಣತಿ ನಮೂನೆ ನೀಡಲಿದ್ದು, ಮತದಾರರು ಕಡ್ಡಾಯವಾಗಿ ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕಿದೆ. ನಮೂನೆಯ ದ್ವಿಪ್ರತಿಯನ್ನು ನೀಡಲಿದ್ದು ಒಂದು ಪ್ರತಿಯನ್ನು ಸ್ವೀಕೃತಿಯಾಗಿ ಮತದಾರರು ತಮ್ಮಲ್ಲೇ ಉಳಿಸಿಕೊಳ್ಳಬೇಕು. ೧೮ ವರ್ಷ ಮೇಲ್ಪಟ್ಟವರು, ಮನೆಯ ಮುಖ್ಯಸ್ಥರು ನಮೂನೆಗೆ ಸಹಿ ಮಾಡಬಹುದಾಗಿದೆ. ಬಿಎಲ್‌ಒಗಳು ಪ್ರತಿ ಮತದಾರರ ಮನೆಗೆ ಮೂರು ಬಾರಿ ಭೇಟಿ ಮಾಡಲಿದ್ದು, ಮತದಾರರು ಮೂರೂ ಬಾರಿಯೂ ಮತದಾರರು ಲಭ್ಯವಿಲ್ಲದಿದ್ದಲ್ಲಿ ಆ ಮತದಾರರನ್ನು ಗೈರು, ಮರಣ, ನಕಲು ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು. ೨೦೨೬ ಅ.೧ಕ್ಕೆ ೧೮ ವರ್ಷ ಪೂರ್ಣಗೊಂಡವರೆಲ್ಲ ಮತದಾರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶವಿದೆ ಎಂದರು.ಮತದಾರ ಪರಿಷ್ಕರಣೆಯ ವಿಶೇಷ ಅಧಿಕಾರಿ ರಾಕೇಶ್ ಮಾತನಾಡಿ, ಮೃತಪಟ್ಟವರ ಹೆಸರು ಕೈಬಿಡುವ, ೧೮ ವರ್ಷ ಮೇಲ್ಪಟ್ಟವರ ಸೇರ್ಪಡೆಗೊಳಿಸುವ, ಸ್ಥಳಾಂತರಗೊಂಡ ಮತದಾರರ ಪರಿಷ್ಕರಣೆ ಆಗಲಿದೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಮನೆಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದಿಷ್ಟಪಡಿಸಿರುವ ೧೨ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದರು.ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಗ್ರೇಡ್೨ ತಹಸೀಲ್ದಾರ್ ಜಗನ್ನಾಥ್, ಕಾಂಗ್ರೆಸ್‌ನ ಮಡೆನೂರು ಕಾಂತರಾಜು, ಜೆಡಿಎಸ್‌ನ ಶಿವಸ್ವಾಮಿ, ಸಂತೋಷ್, ಬಿಜೆಪಿಯ ಬಸವರಾಜು, ಸ್ವಾಮಿ ಇದ್ದರು.ಪೊಟೋ ೭-ಟಿಪಿಟಿ೩ ರಲ್ಲಿ ಕಳುಹಿಸಿದೆ. ತಿಪಟೂರಿನ ತಾಲೂಕು ಕಛೇರಿ ಸಭಾಂಗಣದಲ್ಲಿ ಎಸ್‌ಐಆರ್ ಕುರಿತು ಸರ್ವಪಕ್ಷಗಳ ವಿಶೇಷ ಸಭೆ ನಡೆಯಿತು.