ರಾಷ್ಟ್ರೀಯ ಹಬ್ಬಗಳಲ್ಲಿ ಸಾರ್ವಜನಿಕರು ಭಾಗವಹಿಸಲಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork | Published : Jan 27, 2025 12:48 AM

ಸಾರಾಂಶ

ಮನೆಯ ಕನಿಷ್ಠ ಒಬ್ಬ ಸದಸ್ಯರು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ದೇಶಕ್ಕೆ ನಮ್ಮ ನಿಷ್ಠೆ ಗೌರವನ್ನು ಸಲ್ಲಿಸಬೇಕಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಜಗತ್ತಿನಲ್ಲಿಯೇ ಅತ್ಯಂತ ದೀರ್ಘವಾದ ಲಿಖಿತ ಸಂವಿಧಾನವನ್ನು ಹೊಂದಿದ್ದ ಹೆಗ್ಗಳಿಕೆ ನಮ್ಮದಾಗಿದ್ದು, ಸಂವಿಧಾನವು ಸರ್ವರಿಗೂ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸುವುದರ ಜತೆ ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಭಾನುವಾರ ತಾಲೂಕಾಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ 76ನೇ ಪ್ರಜಾರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಕೇವಲ ಅಧಿಕಾರವನ್ನು ಕೇಳುತ್ತೇವೆ. ಆದರೆ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದೇವೆ ಎಂದರು.

ರಾಷ್ಟ್ರೀಯ ಹಬ್ಬಗಳು ನಮ್ಮ ಕಾರ್ಯಕ್ರಮವಾಗಬೇಕು. ಆದರೆ ಸರ್ಕಾರಿ ಕಾರ್ಯಕ್ರಮಗಳಾಗುತ್ತಿರುವುದು ಸರಿಯಲ್ಲ ಎಂದರು. ಮನೆಯ ಕನಿಷ್ಠ ಒಬ್ಬ ಸದಸ್ಯರು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ದೇಶಕ್ಕೆ ನಮ್ಮ ನಿಷ್ಠೆ ಗೌರವನ್ನು ಸಲ್ಲಿಸಬೇಕಾಗಿದೆ ಎಂದರು.

ಪ್ರಜಾರಾಜ್ಯೋತ್ಸವದ ದಿನದಂದು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ದೇಶದ ಪ್ರಜೆಯಾಗಿ ಜವಾಬ್ದಾರಿಯಿಂದ ಹಾಗೂ ಸ್ವಾಭಿಮಾನದಿಂದ ರಾಷ್ಟ್ರದ ಸೇವೆ ಮಾಡುತ್ತೇವೆ ಎಂದು ಪ್ರತಿಜ್ಞೆಯನ್ನು ಕೈಗೊಳ್ಳಬೇಕಾಗಿದೆ ಎಂದರು.

ದೇಶದಲ್ಲಿ ನಿರುದ್ಯೋಗ ಹಾಗೂ ಬೆಲೆಯೇರಿಕೆಯು ಸಮಸ್ಯೆ ಕಾಡುತ್ತಿದೆ. ಯುವಜನಾಂಗ ಸರ್ಕಾರಿ ನೌಕರಿಯನ್ನು ಹಂಬಲಿಸುವ ಬದಲು ಸ್ವಂತ ಉದ್ಯೋಗವನ್ನು ಮಾಡಲು ಮುಂದಾಗಬೇಕು. ಸ್ವಂತ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿದ್ದು, ಆದರೆ ನಮ್ಮಲ್ಲಿ ಮನಸ್ಸು ಬೇಕಾಗಿದೆ ಎಂದರು.

ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷರಾದ ಲಕ್ಷ್ಮೀ ವಡ್ಡರ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ, ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಲೂಕಿನೆಲ್ಲೆಡೆ ಪ್ರಜಾರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಕೆಎಲ್ಎಸ್ ಪಿಯು ಕಾಲೇಜಿನಲ್ಲಿ ಪ್ರಜಾರಾಜ್ಯೋತ್ಸವವನ್ನು ಆಚರಿಸಲಾಯಿತು. ಭಾರತದ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ

ಸಿದ್ದಾಪುರ: ಪಟ್ಟಣದ ಐತಿಹಾಸಿಕ ನೆಹರೂ ಮೈದಾನದಲ್ಲಿ ಭಾನುವಾರ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ನಮ್ಮ ಹಿರಿಯರು ಸ್ವಾತಂತ್ರ್ಯ ದೊರಕಿದ ನಂತರ ಅಭಿವೃದ್ಧಿಯ ಕನಸನ್ನು ಕಂಡಿದ್ದರು. ಈ ಕನಸನ್ನು ನನಸು ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಜಗತ್ತಿನ ಎಲ್ಲ ದೇಶದ ಸಂವಿಧಾನದ ಒಳ್ಳೆಯ ಅಂಶಗಳನ್ನು ಕ್ರೋಢೀಕರಿಸಿ ನಮ್ಮ ಅತ್ಯುತ್ತಮ ಸಂವಿಧಾನವನ್ನು ರೂಪಿಸಲಾಗಿದೆ. ನಾವೆಲ್ಲರೂ ನಮ್ಮ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು. ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.ಪಟ್ಟಣದ ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಜಿ. ನಾಗರಾಜ, ಸಿಪಿಐ ಸೀತಾರಾಮ, ಪಪಂ ಮುಖ್ಯಾಧಿಕಾರಿ ಜಗದೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.ಶಾಸಕ ಭೀಮಣ್ಣ ನಾಯ್ಕ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಶಾಲಾಮಕ್ಕಳಿಗೆ ಐಸ್ ಕ್ರೀಂ ವಿತರಣೆ ಮಾಡಿದರು.

Share this article