ಸಾರ್ವಜನಿಕರು ಮುಕ್ತವಾಗಿ ಪೊಲೀಸ್‌ ಠಾಣೆಗೆ ಬರಬೇಕು: ಪಿಎಸ್‌ಐ ವರ್ಷ

KannadaprabhaNewsNetwork | Published : Aug 20, 2024 12:46 AM

ಸಾರಾಂಶ

ಸಾರ್ವಜನಿಕರು ಭಯಬಿಟ್ಟು ಮುಕ್ತವಾಗಿ ಠಾಣೆಗೆ ಬಂದು ಸಮಸ್ಯೆ ಪರಿಹರಿಸಿಕೊಂಡು, ಧೈರ್ಯವಾಗಿ ತೆರಳಬೇಕು ಎಂದು ನೂತನ ಪಿಎಸ್‌ಐ ವರ್ಷ ಅಭಿಪ್ರಾಯಪಟ್ಟರು. ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಪೊಲೀಸ್‌ ಅಧಿಕಾರಿಗಳ ಬೀಳ್ಕೊಡುಗೆ, ಸ್ವಾಗತ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಾರ್ವಜನಿಕರು ಭಯಬಿಟ್ಟು ಮುಕ್ತವಾಗಿ ಠಾಣೆಗೆ ಬಂದು ಸಮಸ್ಯೆ ಪರಿಹರಿಸಿಕೊಂಡು, ಧೈರ್ಯವಾಗಿ ತೆರಳಬೇಕು ಎಂದು ನೂತನ ಪಿಎಸ್‌ಐ ವರ್ಷ ಅಭಿಪ್ರಾಯಪಟ್ಟರು.

ನಗರದ ವೆಂಕಟೇಶ್ವರ ಮಹಲ್‌ನಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ಕೊಳ್ಳೇಗಾಲ ಪಟ್ಟಣದ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದಿದ್ದು, ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಬದಲಿಗೆ ನನ್ನ ಕೆಲಸ ಮಾತನಾಡಬೇಕು, ಹಾಗೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದು ವರ್ಷ ಹೇಳಿದರು.

ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿಲ್ಲ, ಕೆಲಸ ಮಾಡಲು ಬಂದಿದ್ದೆನೆ, ಜಾಸ್ತಿ ಮಾತನಾಡುವುದಿಲ್ಲ, ನನ್ನ ಕೆಲಸ ಮಾತಾಡಬೇಕು ಎಂಬ ನಿಟ್ಟಿನಲ್ಲಿ ಕಾಯಾ, ವಾಚಾ, ಮನಸಾ ಕೆಲಸ ಮಾಡುವೆ ಎಂದು ಹೇಳಿದರು.

ಸಾರ್ವಜನಿಕರು ಮುಕ್ತವಾಗಿ ಠಾಣೆಗೆ ಬನ್ನಿ, ನಿಮ್ಮ ಸಮಸ್ಯೆ ಬಗೆಹರಿಸುವೆ, ಧೈರ್ಯದಿಂದ ಬಂದು ನಿಮ್ಮ ಸಮಸ್ಯೆ ಹಂಚಿಕೊಳ್ಳಿ, ಏನೇ ಸಮಸ್ಯೆಗಳಿದ್ದರೂ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.

ಗ್ರಾಮಾಂತರ ಠಾಣೆಯ ಪಿಎಸೈ ಸುಪ್ರೀತ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ 3 ವರುಷಗಳ ಕಾಲ ಕೆಲಸ ನಿರ್ವಹಿಸುವ ಜತೆಗೆ ಅಲ್ಲಿನ ನಾಗರಿಕರ ವಿಶ್ವಾಸಗಳಿಸಿರುವೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದೊಂದಿಗೆ ಉತ್ತಮ ರೀತಿ ಕೆಲಸ ಮಾಡುವೆ, ಸಾರ್ವಜನಿಕ ಸೇವೆಗಾಗಿ ನಾನು ಇಲ್ಲಿಗೆ ಬಂದಿರುವೆ. ಹಿಂದಿನ ಅಧಿಕಾರಿಗಳು ನಿರ್ವಹಿಸಿದಂತೆ ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿ ನಿರ್ವಹಿಸುವೆ ಎಂದರು.

ಬೀಳ್ಕೊಡುಗೆ ಸ್ವೀಕರಿಸಿದ ಪಿಎಸೈ ಮಹೇಶ್ ಕುಮಾರ್ ಮಾತನಾಡಿ, ಶಿವಕುಮಾರಸ್ವಾಮಿ ಬಡಾವಣೆಯ ಕಳ್ಳತನ ಪತ್ತೆ ಹಚ್ಚುವಲ್ಲಿ ಇಲಾಖೆ ನೀಡಿದ ಸಹಕಾರ ಸ್ಮರಿಸುವೆ. ಕೊಳ್ಳೇಗಾಲದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾರ್ವಜನಿಕರು ನೀಡಿದ ಸಹಕಾರ ಕಾರಣ, ಮುಂದೆಯೂ ಸಹ ವರ್ಷ ಅವರು ಉತ್ತಮ ರೀತಿ ಕೆಲಸ ಮಾಡಲು ನಮ್ಮೆಲ್ಲ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿ ಎಂದರು.

ವರ್ಗಾವಣೆಗೊಂಡ ಪಿಎಸ್ಐ ಮಹೇಶ್ ಕುಮಾರ್ ಹಾಗೂ ಮುಖ್ಯ ಪೇದೆಯಿಂದ ಎಎಸ್ಐಯಾಗಿ ಬಡ್ತಿಯಾದ ಲೋಕೇಶ್ ಮತ್ತು ವರ್ಗಾವಣೆಯಾದ ಶಂಕರ್, ಅಶೋಕ್, ಚೇತನ್ ರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು. ಎಸೈ ವರ್ಷಾ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.

ಅಪರಾಧ ವಿಭಾಗದ ಪಿಎಸ್ಐ ಚೆಲುವರಾಜು, ಭೀಮನಗರದ ಯಜಮಾನರು, ಕರವೇ ಕಾರ್ಯಕರ್ತರು, ರೈತ ಸಂಘದ ಪದಾಧಿಕಾರಿಗಳು, ಕಾರು ಮತ್ತು ಆಟೋ ಚಾಲಕರು ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಇದ್ದರು.

Share this article