ಕನ್ನಡಪ್ರಭ ವಾರ್ತೆ ಮಾಲೂರು
ಮಹಾಯೋಗಿ ವೇಮನರ ತತ್ವಪದಗಳು ಇಂದಿಗೂ ಪ್ರಸ್ತುತವಾಗಿದ್ದು,ಅವರ ಸಾಹಿತ್ಯ ಮತ್ತು ತತ್ವಪದಗಳನ್ನು ಕಿರು ಪುಸ್ತಕದಲ್ಲಿ ಮುದ್ರಿಸಿ ಯುವ ಪೀಳಿಗೆಗೆ ವಿತರಿಸಿದಾಗ ಮಹಾನ್ ದಾರ್ಶನಿಕರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರೆಡ್ಡಿ ಜನಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರ ೫೧೨ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾ ಯೋಗಿ ವೇಮನರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವೇಮನರ ಸಾಹಿತ್ಯದ ಕಿರುಹೊತ್ತಿಗೆ ಮುದ್ರಿಸಿವೇಮನರು ರಚಿಸಿದ ಪದ್ಯಗಳು ಮಾನವನ ಜೀವಿತದಲ್ಲಿ ತೊಡಗಿಸಿಕೊಳ್ಳುವ ರತ್ನಗಳಾಗಿವೆ.ಅವರು ರಚಿಸಿರುವ ಕವನಗಳು, ತತ್ವ ಪದ್ಯಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿ ವೇಮನರ ಸಾಹಿತ್ಯ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ. ಇಂತಹ ಸಾಹಿತ್ಯವನ್ನು ಕಿರು ಪುಸ್ತಕದಲ್ಲಿ ಮುದ್ರಿಸಿ ಶಾಲಾ ಕಾಲೇಜಿನ ಮಕ್ಕಳಿಗೆ ವಿತರಿಸಿ ಅವರ ಹಾದಿಯನ್ನು ಪಾಲನೆ ಮಾಡಬೇಕು ಎಂದರು.
ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಎಂ.ಎಸ್.ಪ್ರದೀಪ್ ರೆಡ್ಡಿ ಮಾತನಾಡಿ, ವೇಮನರವರ ಪುತ್ಥಳಿಗೆ ಪ್ರಮುಖ ರಸ್ತೆ, ವೃತ್ತದಲ್ಲಿ ನಿರ್ಮಾಣ ಮಾಡಲು ಅವಕಾಶ ನೀಡದರೆ ಮುಂದಿನ ವೇಮನ ಜಯಂತಿಗೆ ಉದ್ಘಾಟನೆ ಮಾಡಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ರಮೇಶ್, ತಾ.ಪಂ ಇ ಒ ಕೃಷ್ಣಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಪುರಸಭಾ ಸದಸ್ಯ ಎಂ.ವಿ.ವೇಮನ, ಮಾಜಿ ಸದಸ್ಯ ಹನುಮಂತರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಜಿ.ಮಧುಸೂಧನ್, ದರಕಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಗದೇನಹಳ್ಳಿ ಶ್ರೀನಿವಾಸರೆಡ್ಡಿ, ಎಸ್.ವಿ.ಗೋವರ್ಧನರೆಡ್ಡಿ, ಮುಖ್ಯಾಧಿಕಾರಿ ಪ್ರದೀಪ್, ಬಿಇಒ ಚಂದ್ರಕಲಾ, ಮತ್ತಿತರರು ಇದ್ದರು.