ಬಳ್ಳಾರಿ: ನಾವು ಯಾರ ಪರವಾಗಿ ಇರಬೇಕು. ಏನನ್ನು ಪ್ರಕಟಿಸಬೇಕು ಎಂಬ ಬದ್ಧತೆ ಪ್ರಕಾಶಕರಿಗೆ ಇರಬೇಕು. ಯಾವ ಪ್ರಶ್ನೆಗಳಿಗೆ ಲೇಖಕ ಕೇಳಿಸಿಕೊಳ್ಳುತ್ತಾನೋ, ಯಾವ ಪ್ರಶ್ನೆಗಳಿಗೆ ಲೇಖಕ ಉತ್ತರಿಸಬೇಕಾಗುತ್ತದೋ ಅದೇ ಪ್ರಶ್ನೆಗಳನ್ನು ಪ್ರಕಾಶಕರು ಕೇಳಿಸಿಕೊಂಡು, ಉತ್ತರಿಸಬೇಕಾಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ, ವೈಯಕ್ತಿಕ ನೆಲೆಯೊಳಗೆ ವಿವೇಚನೆಯೂ ಹೌದು ಎಂದು ಲೇಖಕ ಹಾಗೂ ಬಳ್ಳಾರಿ ವಿವಿ ಸಿಂಡಿಕೇಟ್ ಸದಸ್ಯ ಬಿ. ಪೀರ್‌ಬಾಷಾ ಅಭಿಪ್ರಾಯಪಟ್ಟರು.
ನಾವು ಏನನ್ನು ಪ್ರಕಟಿಸುತ್ತಿದ್ದೇವೆ. ಯಾರಿಗಾಗಿ, ಏಕೆ ಪ್ರಕಟಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಯಾವ ಕಥೆ, ಕವಿತೆ ಅಥವಾ ಕಾದಂಬರಿ ಯಾವ ಕಾಲಘಟ್ಟದಲ್ಲಿ, ಯಾವ ಒತ್ತಾಸೆಯಲ್ಲಿ ಹುಟ್ಟುತ್ತದೆ ಈ ಎಲ್ಲವೂ ಕೂಡ ಪ್ರಕಾಶನದ ಸಂದರ್ಭದಲ್ಲಿ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳಾಗಿದ್ದು, ಪ್ರಕಾಶಕರಾದವರು ಅತ್ಯಂತ ವಿವೇಚನೆ ಬಳಸಿ ಜನಮುಖಿಯಾದ ಕೃತಿಯನ್ನು ಪ್ರಕಟಿಸಲು ಕಾಳಜಿ ವಹಿಸಬೇಕು. ಪ್ರಕಾಶಕನಿಗೆ ಜನಾಶಯಗಳಿಗೇ ಮುಖ್ಯವಾಗಬೇಕು ಎಂದರು.
ಪ್ರಕಾಶಕರು ದುಡ್ಡಿನ ಹಿಂದೆ ಬಿದ್ದಿಲ್ಲಬದ್ಧತೆ ಎಂಬುದು ರಾಜಕೀಯಕ್ಕೆ ಮಾತ್ರವಲ್ಲ. ಲೇಖಕ ಹಾಗೂ ಪ್ರಕಾಶಕರಿಗೂ ಇರಬೇಕು. ಮಾನವೀಯ ಹಾಗೂ ವಿವೇಚನೆ ನೆಲೆಯಲ್ಲಿ ಪುಸ್ತಕ ಪ್ರಕಟಿಸುವ ನಿಲುವು ತೆಗೆದುಕೊಳ್ಳಬೇಕು. ಒಂದು ಪ್ರಕಾಶನ ಸಂಸ್ಥೆಗೆ ಹತ್ತಾರು ಲೇಖಕರನ್ನು ಬೆಳಕಿಗೆ ತರುವ ಶಕ್ತಿ ಇರುತ್ತದೆ. ಒಂದು ತಲೆಮಾರಿನ ಲೇಖಕರನ್ನೇ ಕಟ್ಟಿ ಬೆಳೆಸುವ ಕೆಲಸ ಪ್ರಕಾಶನ ಸಂಸ್ಥೆ ಮಾಡುತ್ತದೆ. ಈ ಹಿಂದೆ ಲಂಕೇಶ್ ಪ್ರಕಾಶನ, ಈಗಿನ ಅಕ್ಷರ ಪ್ರಕಾಶನ, ಲೋಹಿಯಾ ಪ್ರಕಾಶನದಂತಹ ಅನೇಕ ಪ್ರಕಾಶನ ಸಂಸ್ಥೆಗಳು ಈ ರೀತಿಯ ಬದ್ಧತೆಯನ್ನು ತೋರಿಸಿವೆ. ಹೀಗಾಗಿ ಪ್ರಕಾಶಕ ಅಥವಾ ಪ್ರಕಾಶನ ಸಂಸ್ಥೆಯ ಮೇಲೆ ಅಪಾರವಾದ ಸಾಮಾಜಿಕ ಜವಾಬ್ದಾರಿಯಿದೆ ಎಂದು ಹೇಳಿದರು.
ಸಾಹಿತ್ಯದಲ್ಲಿ ಸಮಾಜವಾದಿ ಆಶಯಗಳನ್ನು ದಾಖಲಿಸಲು, ಸಮಾಜವಾದಿ ಆಶಯದ ಲೇಖಕರಿಗೆ ಬಹುದೊಡ್ಡ ವೇದಿಕೆಯ ನೆಲೆಯಾಗಲು ಬಹುದೊಡ್ಡ ಚಳವಳಿ ರೀತಿಯಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನ ಮಾಡಿದೆ. ಪಲ್ಲವ ಪ್ರಕಾಶನ, ಲಡಾಯಿ ಪ್ರಕಾಶನ ಸೇರಿದಂತೆ ನಾಡಿನ ಅನೇಕ ಪ್ರಕಾಶಕರು ಜನತೆಯ ಸಿದ್ಧಾಂತ, ಜನತೆಯ ತಾತ್ವಿಕತೆ, ಆಲೋಚನೆ ಹಾಗೂ ಅಭಿವ್ಯಕ್ತಿಗೆ ಬಹುದೊಡ್ಡ ಧ್ವನಿ ಕೊಡುವಂತಹ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅದೃಷ್ಟವಶಾತ್ ಕರ್ನಾಟಕದಲ್ಲಿ ಬೆರಳೆಕೆಯ ಒಂದಷ್ಟು ಜನರು ಬಿಟ್ಟರೆ ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಪ್ರಕಾಶಕರು ದುಡ್ಡಿನ ಹಿಂದೆ ಬಿದ್ದಿಲ್ಲ. ತಮ್ಮ ಪ್ರಕಾಶನ ಸಂಸ್ಥೆಯನ್ನು ಉಳಿಸಿಕೊಳ್ಳಲು ಬೇಕಾದ ಲೆಕ್ಕಾಚಾರದ ಮಟ್ಟಿಗೆ ವ್ಯವಹಾರಿಕರಾಗಿದ್ದಾರೆ. ಅದು ಅನಿವಾರ್ಯವೂ ಹೌದು ಎಂದು ತಿಳಿಸಿದ ಲೇಖಕ ಪೀರ್‌ಬಾಷಾ ಅವರು, ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಪ್ರಕಾಶನ ಎಂಬುದು ಯಾವತ್ತೂ ಜನಪರವಾಗಿದೆ. ಜನಪರವಾಗಿ ಸ್ಪಂದಿಸಿದೆ. ಈ ರೀತಿಯ ಪ್ರಕಾಶನ ಪರಂಪರೆ ಮುಂದುವರಿಯಲಿ. ಮತ್ತಷ್ಟು ಜನಪರವಾದ ಸಾಹಿತ್ಯ ಪ್ರಕಟಗೊಳ್ಳಲಿ. ಇಂತಹ ಸಾಹಿತ್ಯ ಓದುವ ವರ್ಗ ಹೆಚ್ಚಾಗಲಿ ಎಂದು ಆಶಿಸಿದರು.ಕನ್ನಡ ಪ್ರಕಾಶನ ರಂಗ ಒಂದು ಸ್ಥೂಲ ನೋಟ ಕುರಿತು ಅಭಿನವ ಪ್ರಕಾಶನದ ನ. ರವಿಕುಮಾರ್, ಪುಸ್ತಕ ನಿರ್ಮಾರ್ಣ ವಿವಿಧ ಹಂತಗಳು ಕುರಿತು ಸಂಗಾತ ಪ್ರಕಾಶನದ ಡಾ. ಟಿ.ಎಸ್. ಗೊರವರ, ಪುಸ್ತಕ ಪ್ರಕಾಶನದ ಕಾನೂನುಗಳು ಕುರಿತು ವಕೀಲ ಭೀಮನಗೌಡ, ಕರಡು ತಿದ್ದುವಿಕೆಯ ವಿವಿಧ ಆಯಾಮಗಳು ಕುರಿತು ಬೆಂಗಳೂರಿನ ಲೇಖಕ ಶಿವಕುಮಾರ ಮಾವಲಿ ಅವರು ಮಾತನಾಡಿದರು.
ಪಲ್ಲವ ಪ್ರಕಾಶನದ ಡಾ. ಪಲ್ಲವ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಜರುಗಿದ "ಪ್ರಕಾಶನ ನನ್ನ ಅರಿವನ್ನು ವಿಸ್ತರಿಸಿದ ಬಗೆ ವಿಷಯ ಕುರಿತ ಸಂವಾದ " ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು, ಪ್ರಕಾಶನ ಎಂಬುದು ನಿಶ್ಶಬ್ದವಾಗಿ ನಡೆಯುವ ಕ್ರಾಂತಿಯಾಗಿದೆ. ಪ್ರಕಾಶನದಿಂದ ಏನು ಲಾಭವಾಗಿದೆ ಎಂದು ಕೇಳಿದರೆ ನನಗೆ ವೈಚಾರಿಕತೆಯನ್ನು ವಿಸ್ತರಿಸಿದ ಲಾಭವಾಗಿದೆ ಎಂದು ಉತ್ತರಿಸುತ್ತೇನೆ ಎಂದು ಹೇಳಿದರು.ಪುಸ್ತಕ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ ಕುರಿತು ಬೆಂಗಳೂರಿನ ಕಲಾವಿದ ಜಿ.ಎಸ್. ನಾಗನಾಥ, ಮುದ್ರಣಶಾಲೆಯ ವಿವಿಧ ಹಂತಗಳು ಕುರಿತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ್ ಮಾತನಾಡಿದರು.
ಪುಸ್ತಕ ಸಂಸ್ಕೃತಿಯ ಪ್ರಸಾರ ಮತ್ತು ಪ್ರಸಾರಾಂಗಗಳು ವಿಷಯ ಕುರಿತು ಹಂಪಿ ಕನ್ನಡ ವಿವಿಯ ಕನ್ನಡ ವಿಭಾಗ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ಪತ್ರಿಕೆ ವಿಮರ್ಶೆ ಮತ್ತು ಪ್ರಸಾರ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಹಾಗೂ ಪತ್ರಿಕಾ ವಿಮರ್ಶೆ ಮತ್ತು ಪ್ರಸಾರ ಕುರಿತು ರವೀಂದ್ರನಾಥ ಸಿರಿವರ ಮಾತನಾಡಿದರು.ಲೇಖಕರಾದ ಡಾ. ಶಿವಲಿಂಗಪ್ಪ ಹಂದಿಹಾಳು, ಡಾ. ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳು ಉಪಸ್ಥಿತರಿದ್ದರು. ವಿವಿಯ ಪ್ರಸಾರಾಂಗ ವಿಭಾಗದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ತಿಪ್ಪೇರುದ್ರ ಅವರು ನಿರ್ವಹಿಸಿದರು.