ಹಾವೇರಿ: ಇಲ್ಲಿನ ಹುಕ್ಕೇರಿಮಠದ ಭಕ್ತರು ಆರೋಗ್ಯವಂತರು, ವಿನಯಶೀಲರು, ಸದ್ಗುಣಿಗಳು ಹಾಗೂ ಸಂಸ್ಕಾರವಂತರು ಆಗಬೇಕಿರುವ ನಿಟ್ಟಿನಲ್ಲಿ ರೂಪಿಸಿರುವ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಅಭಿಯಾನ ಯಶಸ್ವಿಯಾಗಿರುವುದು ಅಭಿಮಾನ ಮೂಡಿಸಿದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಗದಿಗೇರ ಓಣಿ, ಯರೇಶಿಮಿ ಓಣಿ ಹಾಗೂ ಮೇಲಿನಪೇಟೆಯಲ್ಲಿ ಜರುಗಿದ ಪಾದಯಾತ್ರೆ ಬಳಿಕ ಅವರು ಮಾತನಾಡಿದರು. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಂದ ಶ್ರೀಮಠಕ್ಕೆ ವಿಭಿನ್ನ ಹಿನ್ನೆಲೆ ಇದೆ. ಇಂಥ ಪರಂಪರೆಯ ಮಠದ ಭಕ್ತರು ದುಶ್ಚಟಗಳಿಂದ ಆರ್ಥಿಕ ಹಾಗೂ ಕೌಟುಂಬಿಕ ಸಂಕಷ್ಟ ಎದುರಿಸಬಾರದು. ಇದೇ ಕಾರಣಕ್ಕೆ ತಾಲೂಕಿನ 70 ಹಳ್ಳಿಗಳಲ್ಲಿ ಜನ ಜಾಗೃತಿ ರಥ ಸಂಚರಿಸಿದೆ. ಇದೇ ತಿಂಗಳು 27ರಂದು ನಗರದ ಮುನ್ಸಿಪಲ್ ಮೈದಾನದಲ್ಲಿ 51 ಸಾವಿರ ಭಕ್ತರಿಂದ ವಚನ ಪಠಣ ಜರುಗಲಿದೆ. ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಸಂಸ್ಕಾರ ರೂಪಿಸಲು ಶ್ರೀ ಮಠ ಹೆಮ್ಮೆ ಪಡುತ್ತದೆ ಎಂದರು.ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸವ ಭಕ್ತರಿಂದ ಭಾರತಾಂಬೆಯ ತ್ರಿವರ್ಣ ಧ್ವಜದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಬಟ್ಟೆಯಿಂದ ಆವೃತವಾದ ಬುಟ್ಟಿಯೊಂದಿಗೆ ಬಸವ ಬುತ್ತಿ ಜರುಗಲಿದೆ. ಜಾತಿ, ಮತ ಮತ್ತು ಪಂಥ ಭೇದವಿಲ್ಲದೆ ನಡೆಯುವ ಜಾತ್ರೆಗೆ ನಾಡಿನ ವಿವಿಧ ಭಾಗದ 111ಕ್ಕೂ ಹೆಚ್ಚು ಸ್ವಾಮೀಜಿಯವರು ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಸ್ಥಳೀಯರಾದ ತಾವೂ ತಮ್ಮ ಬಂಧು ಮಿತ್ರರನ್ನು ಆಹ್ವಾನಿಸಿ ಯಶಸ್ವಿಗೊಳಿಸಬೇಕು. ಅಷ್ಟೇ ಅಲ್ಲದೇ ಬಡ ಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸಲು ಸದಾಶಿವ ಸ್ವಾಮೀಜಿಯವರ ಬೆಳ್ಳಿ ತುಲಾಭಾರಕ್ಕೆ ತಾವು ದಾನದ ರೂಪದಲ್ಲಿ ಸಹಕಾರ ನೀಡಬೇಕು ಎಂದರು.ಶೇಗುಣಸಿಯ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಹಸಿದ ಹೊಟ್ಟೆಗೆ ಅನ್ನ, ಜ್ಞಾನ ಹಾಗೂ ಸಂಸ್ಕಾರ ನೀಡಿದ ಹೆಗ್ಗಳಿಕೆ ಹುಕ್ಕೇರಿ ಮಠದ್ದು. ನಮ್ಮೂರ ಜಾತ್ರೆಯನ್ನು ಯಶಸ್ವಿಗೊಳಿಸಲು ನಿಷ್ಕಲ್ಮಶ ಭಕ್ತಿ ಸಾಕು. ಸಾವಿರಾರು ಮಕ್ಕಳನ್ನು ಸಲಹುತ್ತಿರುವ ಸದಾಶಿವ ಶ್ರೀಗಳು ಸರ್ವರಿಗೂ ದಾಸೋಹ ವ್ಯವಸ್ಥೆ ಕಲ್ಪಿಸಿರುವರು. ಅನ್ನದ ಬೆಲೆ ಅರಿತು ಅದನ್ನು ಕೆಡಿಸುವ ಪ್ರಯತ್ನ ಸಲ್ಲದು ಎಂದರು. ಇದೇ ಸಂದರ್ಭದಲ್ಲಿ ಭಕ್ತರಿಗೆ ರುದ್ರಾಕ್ಷಿ ವಿತರಿಸಲಾಯಿತು. ವೀರಭದ್ರ ದೇವರು ಕಾರ್ಯಕ್ರಮ ನಿರ್ವಹಿಸಿದರು.ವಿಜಯಪುರದ ಘನಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಕರಬಸಪ್ಪ ಹಲಗಣ್ಣವರ, ಪ್ರಭು ಹಿಟ್ನಳ್ಳಿ, ಲಿಂಗರಾಜ ಯರೇಶಿಮಿ, ಚಂದ್ರು ಗದಗಿ, ಶಿವರಾಜ ಮತ್ತೂರ, ಶಿವರಾಜ ಗಾಳಿ, ಸಿದ್ದು ಬೆಳ್ಳಟ್ಟಿ, ರೇಣುಕಾ ಪುತ್ರನ್, ಅನಸೂಯಾ ನಂದಿವಾಡ ಹಾಗೂ ಶಿವಜ್ಯೋತಿ ಮಹಿಳಾ ಮಂಡಳದ ಸದಸ್ಯರು ಇದ್ದರು.