ಶಿರಸಿ: ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಯು ನಿರ್ದಿಷ್ಟ ಸಮಿತಿಯಿಂದ ಮಹಜರ್ ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರೆ, ಮಹಜರ್ ಮಾಡಲು ಹೇಳಿದ್ದು ಒಂದಕ್ಕೆ ಆದರೆ ಮಾಡಿದ್ದು ಇನ್ನೊಂದಕ್ಕೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಕಾಯಿದೆ ಅಡಿಯಲ್ಲಿನ ರಾಜ್ಯಮಟ್ಟದ ಉಸ್ತುವಾರಿ ಸಮಿತಿ ಸಭೆ ನಡವಳಿಕೆಯನ್ನು ಗುರುವಾರ ನಗರದ ಅರಣ್ಯಭೂಮಿ ಹೋರಾಟಗಾರರ ಕಾರ್ಯಾಲಯದಲ್ಲಿ ಅವರು ಪ್ರದರ್ಶಿಸಿದರು.ನಿರ್ದಿಷ್ಟ ದಾಖಲೆ ಕೊರತೆಯಿಂದ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಿದ ಅರ್ಜಿಗಳ ಕ್ಷೇತ್ರದ ಸಾಗುವಳಿ ದೃಢೀಕರಣಕ್ಕೆ, ಉನ್ನತ ಮಟ್ಟದ ಸಮಿತಿಯಿಂದ ಮಹಜರ್ ಮಾಡಿ, ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು ರಾಜ್ಯ ಉಸ್ತುವಾರಿ ಸಮಿತಿಯು ಜಿಲ್ಲಾಧಿಕಾರಿಗೆ ಜ. ೩ರಂದು ನಿರ್ದೇಶನ ನೀಡಿದೆ. ಆದರೆ, ನಿರ್ದೇಶನದ ಮೂಲ ಅಂಶವಾದ ಸಾಗುವಳಿ ಕುರುಹು ಮತ್ತು ಸಾಂದರ್ಭಿಕ ದಾಖಲೆಗಳನ್ನು ಪರಿಗಣಿಸದೇ ಅರ್ಜಿದಾರನ ಅರ್ಜಿಗೆ ಸಂಬಂಧಿಸಿ ಮೌಲ್ಯತೆಯನ್ನು ಪರಿಶೀಲಿಸುತ್ತಿರುವುದು ಖೇದಕರ ಎಂದು ಹೇಳಿದರು.
ರಾಜ್ಯಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಕಾನೂನು ನೀತಿ, ನಿಯಮಬಾಹಿರವಾಗಿ ಹಾಗೂ ಸಾಗುವಳಿ ಮಹಜರ್ ವರದಿಗೆ ಪ್ರಾತಿನಿಧ್ಯ ನೀಡದೇ, ಅರ್ಜಿದಾರನ ಹಿಡುವಳಿ, ಆರ್ಥಿಕ ಉತ್ಪನ್ನ ಮುಂತಾದ ಷರತ್ತುಬದ್ಧ ಪರಿಗಣನೆ ಮೇರೆಗೆ ಮಾಹಿತಿ ಸಂಗ್ರಹಿಸುವುದು ಹಾಗೂ ಅರ್ಜಿ ಮೌಲ್ಯತೆಯನ್ನು ಪರಿಶೀಲಿಸುವ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಮಹಜರ್ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ಹಾಜರಾತಿಗೆ ಅವಕಾಶ ನೀಡಿಲ್ಲ. ಅರಣ್ಯವಾಸಿಗೆ ನೋಟಿಸ್ ನೀಡದೇ, ಮಾಹಿತಿ ತಿಳಿಸದೇ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಅರ್ಜಿದಾರರ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಅರ್ಜಿ ಪರಿಗಣನೆಗೆ ಅವಕಾಶ ಇಲ್ಲದಿರುವುದು ಕಾನೂನಿಗೆ ವ್ಯತಿರಿಕ್ತವಾದ ನೀತಿ. ಈ ಕುರಿತು ಉಸ್ತವಾರಿ ಸಮಿತಿಯ ಗಮನಕ್ಕೆ ತರಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.
ಕಾನೂನು ಸಲಹಗಾರ ಉದಯ ನಾಯ್ಕ, ಮಂಜುನಾಥ ತಿಮ್ಮ ನಾಯ್ಕ ಬಿದ್ರಳ್ಳಿ ಉಪಸ್ಥಿತರಿದ್ದರು.