ಹುಬ್ಬಳ್ಳಿ:
ವೇತನ ಪರಿಷ್ಕರಣೆ, ಹಿಂಬಾಕಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಬೆಂಗಳೂರಿನಲ್ಲಿ ಸಾರಿಗೆ ನೌಕರರು ಹೋರಾಟ ನಡೆಸಿದರೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಮಾತ್ರ ಯಾವುದೇ ಪರಿಣಾಮ ಬೀರಲಿಲ್ಲ. ಎಂದಿನಂತೆ ಬಸ್ ಸಂಚರಿಸಿದವು. ಹೋರಾಟದಿಂದ ಸಾರಿಗೆ ವ್ಯತ್ಯಯವಾಗಬಹುದೆಂಬ ಆತಂಕದಲ್ಲಿದ್ದ ಅಧಿಕಾರಿಗಳು ಹಾಗೂ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಕಾರವಾರ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ 9 ಘಟಕಗಳಲ್ಲಿ 4979 ಮಾರ್ಗಸೂಚಿಗಳಿವೆ. ಗುರುವಾರ ಎಂದಿನಂತೆ ಶೆಡ್ಯೂಲ್ ಪ್ರಕಾರ ಎಲ್ಲ ಬಸ್ ಸಂಚಾರ ನಡೆಸಿದವು.
ಸಾರಿಗೆ ನೌಕರರ ಸಂಘಟನೆಗಳು ನೀಡಿರುವ ಧರಣಿಯಲ್ಲಿ ನೌಕರರು ಪಾಲ್ಗೊಂಡಲ್ಲಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ರಜೆಯ ಮೇಲಿರುವ ಕೆಲವೇ ಕೆಲ ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಉಳಿದವರು ಗೈರಾಗಿಲ್ಲ.ಸಭೆ ನಡೆಸಿದ ಎಂಡಿ:
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ, ಸಂಸ್ಥೆಯ ವ್ಯಾಪ್ತಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆ ಸಭೆ ನಡೆಸಿ ಸಂಚಾರ ಸಮಸ್ಯೆ ಆಗಿದೆಯೇ ಎಂಬುದರ ಕುರಿತು ಮಾಹಿತಿ ಪಡೆದರು. ಕರ್ತವ್ಯಕ್ಕೆ ಗೈರಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದರೆ ಶಿಸ್ತು ಕ್ರಮಕೈಗೊಳ್ಳುವಂತೆ ಸೂಚಿಸಿದರು.
100ಕ್ಕೂ ಅಧಿಕ ನೌಕರರು ಭಾಗಿ:
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರಿಗೆ ನೌಕರರ ಧರಣಿಯಲ್ಲಿ ಧಾರವಾಡ ಜಿಲ್ಲೆಯ 100ಕ್ಕೂ ಅಧಿಕ ನೌಕರರು ಪಾಲ್ಗೊಂಡಿದ್ದಾರೆ. ಬಹುತೇಕರು ವಾರದ ರಜೆ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಅಧಿಕೃತವಾಗಿ ರಜೆ ಹಾಕಿದವರು ಧರಣಿಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿತು.