ಥಳಿತಕ್ಕೆ ಒಳಗಾದ ದಲಿತ ಯುವಕನಿಂದಲೇ ದೇಗುಲದಲ್ಲಿ ಪೂಜೆ

KannadaprabhaNewsNetwork |  
Published : Jan 10, 2024, 01:45 AM IST
ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಇದ್ದರು. | Kannada Prabha

ಸಾರಾಂಶ

ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ಬಾಗಿಲು ತೆಗೆದು, ದಲಿತ ಮುಖಂಡರು, ಥಳಿತಕ್ಕೆ ಒಳಗಾದ ಯುವಕ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು.

- ದೇವಾಲಯದ ಬೀಗ ಒಡೆದು ಬಾಗಿಲು ತೆರವು । ಸಂವಿಧಾನ ಪೀಠಿಕೆ ಓದಿದರು । ಗೇರುಮರಡಿ ಗ್ರಾಮಕ್ಕೆ ದಲಿತ ಮುಖಂಡರು ಭೇಟಿ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಥಳಿತಕ್ಕೆ ಒಳಗಾಗಿದ್ದ ದಲಿತ ಯುವಕನಿಂದಲೇ ದೇವಾಲಯದಲ್ಲಿ ಮಂಗಳವಾರ ಪೂಜೆ ಸಲ್ಲಿಸಲಾಯಿತು.

ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ಬಾಗಿಲು ತೆಗೆದು, ದಲಿತ ಮುಖಂಡರು ಹಾಗೂ ಸಮುದಾಯದವರು ದೇವಾಲಯದೊಳಗೆ ಪ್ರವೇಶ ಮಾಡಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಎಲ್ಲರೂ ಪಠಿಸಿದರು.

ಜ.1 ರಂದು ಗೇರುಮರಡಿ ಗ್ರಾಮದಲ್ಲಿ ಕಟ್ಟಡದ ಕೆಲಸವನ್ನು ಸಮೀಪದ ಎಂ.ಸಿ.ಹಳ್ಳಿಯ ದಲಿತ ಯುವಕ ಮಾರುತಿ ಯವರು ಜೆಸಿಬಿಯಲ್ಲಿ ಮಾಡುತ್ತಿರುವ ಸಂದರ್ಭದಲ್ಲಿ ಡಿಶ್‌ ಕೇಬಲ್ ತುಂಡಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿ 2,200 ರು. ದಂಡ ವಸೂಲಿ ಮಾಡಿದ್ದರು.

ಗಾಯಗೊಂಡಿದ್ದ ಮಾರುತಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು, ಅವರು ಕೊಟ್ಟ ದೂರಿ ನನ್ವಯ ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದ ಅರ್ಚಕ ಅಪ್ಪು ಸೇರಿದಂತೆ 15 ಜನರ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ದೇವಾಲಯದ ಬಾಗಿಲು ಓಪನ್: ಜ. 1 ರಂದು ಬೆಳಿಗ್ಗೆ ಕಂಬದ ರಂಗನಾಥಸ್ವಾಮಿ ದೇವಾಲಯದಲ್ಲಿ ಅರ್ಚಕ ಅಪ್ಪು ಪೂಜೆ ಮಾಡಿ ಬಾಗಿಲಿಗೆ ಬೀಗ ಹಾಕಿದ್ದರು. ಮಧ್ಯಾಹ್ನದ ನಂತರ ಚಾಲಕ ಮಾರುತಿಗೆ ಹಲ್ಲೆ ನಡೆಯುತ್ತಿದ್ದಂತೆ ಅದರಲ್ಲಿ ತನ್ನ ಹೆಸರು ಇರುವುದರಿಂದ ಅಪ್ಪು ಅವರು ನಾಪತ್ತೆಯಾಗಿದ್ದರು.

ಅಂದಿನಿಂದ ದೇವಾಲಯದಲ್ಲಿ ಪೂಜೆ ನಡೆದಿಲ್ಲ. ಕಾರಣ, ಅಪ್ಪು ಅವರು ತಮ್ಮೊಂದಿಗೆ ದೇವಸ್ಥಾನದ ಬೀಗವನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಮಂಗಳವಾರ ಸಂಜೆ ದಲಿತ ಸಂಘಟನೆ ಸ್ವಾಭಿಮಾನಿ ಒಕ್ಕೂಟದ ಸಂಚಾಲಕ ಪ್ರೊ. ಹರಿರಾಮ್, ಡಾ. ಕೋದಂಡರಾಮ್, ಕೆ.ಜಿ. ನಾಗರಾಜ್ ನೇತೃತ್ವದಲ್ಲಿ ದಲಿತ ಮುಖಂಡರು ತರೀಕೆರೆ ತಾಲೂಕು ಕಚೇರಿ ಎದುರು ಧರಣಿ ನಡೆಸಿ, ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ರಾಜೀವ್ ಅವರಿಗೆ ಮನವಿ ಸಲ್ಲಿಸಿದರು.

ನಂತರ ಗೇರುಮರಡಿ ಗ್ರಾಮಕ್ಕೆ ತೆರಳಿದ ದಲಿತ ಮುಖಂಡರು ದೇವಾಲಯಕ್ಕೆ ತೆರಳಿ ಬೀಗ ಒಡೆದರು, ಬಳಿಕ ತಮ್ಮೊಂದಿಗೆ ಇದ್ದ ಚಾಲಕ ಮಾರುತಿ ಅವರಿಂದಲೇ ದೇವಾಲಯದಲ್ಲಿ ಪೂಜೆ ಮಾಡಿಸಿದರು, ನಂತರ ಸಂವಿಧಾನದ ಪೀಠಿಕೆಯನ್ನು ಓದಿ, ಕೆಲ ಹೊತ್ತು ಸ್ಥಳದಲ್ಲಿಯೇ ಇದ್ದು ನಂತರ ಗೇರುಮರಡಿ ಗ್ರಾಮದಿಂದ ವಾಪಸ್ ತೆರಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ಡಿವೈಎಸ್‌ಪಿ ಹಾಲಮೂರ್ತಿರಾವ್, ತಹಸೀಲ್ದಾರ್ ರಾಜೀವ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

9 ಕೆಸಿಕೆಎಂ 6

ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ದಲಿತ ಮುಖಂಡರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ