ಭೂ ಫಲವತ್ತತೆ ಕಾಪಾಡಲು ದ್ವಿದಳ ಧಾನ್ಯ ಬೆಳೆ ಅಗತ್ಯ: ಎನ್. ಮರಡ್ಡಿ

KannadaprabhaNewsNetwork | Published : Jul 1, 2025 12:47 AM

ಏಕಬೆಳೆ ಪದ್ಧತಿ ಅನುಸರಿಸುವುರಿಂದ ಭೂ ಫಲವತ್ತತೆ ನಾಶವಾಗಿ ಇಳುವರಿ ಪ್ರಮಾಣ ಕುಂಠಿತವಾಗುತ್ತದೆ. ತೊಗರಿ, ಕಡಲೆ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆದರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ

ಕನ್ನಡಪ್ರಭ ವಾರ್ತೆ ಕುರುಗೋಡು

ಏಕಬೆಳೆ ಪದ್ಧತಿ ಅನುಸರಿಸುವುರಿಂದ ಭೂ ಫಲವತ್ತತೆ ನಾಶವಾಗಿ ಇಳುವರಿ ಪ್ರಮಾಣ ಕುಂಠಿತವಾಗುತ್ತದೆ. ತೊಗರಿ, ಕಡಲೆ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆದರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದು ಧಾರವಾಡದ ಜಲ ಮತ್ತು ನೆಲ (ವಾಲ್ಮಿ) ಸಂಸ್ಥೆಯ ನಿರ್ದೇಶಕ ಗಿರೀಶ್ ಎನ್. ಮರಡ್ಡಿ ಸಲಹೆ ನೀಡಿದರು.

ತಾಲೂಕಿನ ದಮ್ಮೂರು ಗ್ರಾಮದಲ್ಲಿ ಧಾರವಾಡದ (ವಾಲ್ಮಿ) ಸಂಸ್ಥೆ, ಹಗರಿ ಕೃಷಿ ಮಹಾವಿದ್ಯಾಲಯದ ವತಿಯಿಂದ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬೆಳೆಗಳಿಗೆ ಅಗತ್ಯಕ್ಕಿಂತ ನೀರು, ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ.

ವಾಲ್ಮಿ ಸಂಸ್ಥೆಯ ಸಮಾಲೋಚಕ ಸುರೇಶ್ ಕುಲಕರ್ಣಿ ಮಾತನಾಡಿ, ದಮ್ಮೂರು ಗ್ರಾಮ ೯೦೦೦ಕ್ಕೂ ಅಧಿಕ ಎಕರೆ ನೀರಾವರು ಜಮೀನು ಹೊಂದಿದೆ. ನೀರು ಮತ್ತು ಮಣ್ಣು ನಿರ್ವಹಣೆ ಇಲ್ಲದೆ ಫಲವತ್ತತೆ ನಾಶವಾಗಿದೆ. ನೀರು ನಿರ್ವಹಣೆ ಮತ್ತು ಭೂ ಫಲವತ್ತತೆ ರಕ್ಷಣೆ ಕುರಿತು ವಾಲ್ಮಿ ಸಂಸ್ಥೆಯಲ್ಲಿ ತರಬೇತಿ ಪಡೆಯಿರಿ ಎಂದು ಸಲಹೆ ನೀಡಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಆದಿ ನಾರಾಯಣ ರೆಡ್ಡಿ ಕಾರ್ಯಾಗಾರ ಉದ್ಘಾಟಿಸಿದರು

ಹಗರಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾಗೇಶ ಬಿ. ಜಾನೇಕಲ್, ವಾಲ್ಮಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ನಾಗರಾಜ್ ತಹಸಿಲ್ದಾರ್, ದಮ್ಮುರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಮಂಜುನಾಥ್ ಉಪಾಧ್ಯಕ್ಷೆ ಗಂಗಮ್ಮ, ಪಿಡಿಒ ಎನ್. ಮಲ್ಲಿಕಾರ್ಜುನ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜೀವರೆಡ್ಡಿ, ಉಪಾಧ್ಯಕ್ಷ ಡಿ. ಅಂಜನಪ್ಪ, ಜಿಂಕಲ್ ವೆಂಕಟೇಶ ಮತ್ತು ಲಕ್ಷ್ಮಿಕಾಂತ ರೆಡ್ಡಿ ಇದ್ದರು.

ಸಲಹೆ:

ಮೆಣಸಿನಕಾಯಿ ಬೆಳೆಗಾರರು ಭೂಮಿ ನಿರ್ವಹಣೆ ಮಾಡದ ಪರಿಣಾಮ ಮುಟುರು ರೋಗ ಮತ್ತು ಕೀಟಗಳ ಬಾಧೆ ಎದುರಿಸಬೇಕಾಗಿದೆ. ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಕ್ರಿಮಿನಾಶಕ ರಸಗೊಬ್ಬರ ಬಳಸಬೇಕು ಎಂದು ವಾಲ್ಮಿ ಸಂಸ್ಥೆಯ ಸಮಾಲೋಚಕ ರಾಘವೇಂದ್ರ ತೆಗ್ಗಿ ಸಲಹೆ ನೀಡಿದರು.