ನಾಳೆಯಿಂದ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಆಂದೋಲನ

KannadaprabhaNewsNetwork |  
Published : Mar 02, 2024, 01:49 AM IST
ಚಿತ್ರದುರ್ಗ ಎರಡನೇ ಪುಟದ  ಬಾಟಂ   | Kannada Prabha

ಸಾರಾಂಶ

ಪಲ್ಸ್ ಪೋಲಿಯೋ ಕಾರ್ಯಕ್ರಮ ಹಿನ್ನೆಲೆ ಚಿತ್ರದುರ್ಗ ನಗರ ಆರೋಗ್ಯ ಕೇಂದ್ರಗಳ ಎಲ್ಲಾ ಮೇಲ್ವಿಚಾರಣಾ ತಂಡಗಳ ಮೇಲ್ವಿಚಾರಕರಿಗೆ ಪುನರ್-ಮನನ ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಾದ್ಯಂತ ಮಾರ್ಚ್ 3 ರಿಂದ 6 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಅಭಿನವ್ ಹೇಳಿದರು.

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಿತ್ರದುರ್ಗ ನಗರ ಆರೋಗ್ಯ ಕೇಂದ್ರಗಳ ಎಲ್ಲಾ ಮೇಲ್ವಿಚಾರಣಾ ತಂಡಗಳ ಮೇಲ್ವಿಚಾರಕರಿಗೆ ಪುನರ್-ಮನನ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಯಾರೊಬ್ಬ ಮಗುವೂ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದರು.

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಒಟ್ಟು 1213 ತಂಡಗಳನ್ನು ರಚಿಸಿಕೊಳ್ಳಲಾಗಿದೆ. ಕಳೆದ ಬಾರಿ ನಡೆಸಿದ ಲಸಿಕಾ ಕೇಂದ್ರಗಳಲ್ಲಿ ಈ ಬಾರಿಯೂ ಸಹ ಎರಡು ಹನಿಗಳ ಪೋಲಿಯೋ ಲಸಿಕೆ ಹಾಕಲಾಗುವುದು. ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 259 ಮೇಲ್ವಿಚಾರಕರನ್ನು ನೇಮಿಸಿದೆ. ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಪುನಹ ಪೋಲಿಯೋ ಹಾಕಿಸಲು 1,35,105 ಮಕ್ಕಳನ್ನು ಗುರುತಿಸಲಾಗಿದೆ. ಸಾರ್ವಜನಿಕರು, ಸರ್ಕಾರೇತರ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಇತರೆ ಅಧಿಕಾರಿ ವರ್ಗದವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಹಕರಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಗಿರೀಶ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಲಸಿಕೆ ನೀಡುವಾಗ ಎಲ್ಲಾ ಸೂಕ್ಷ್ಮತೆಗಳನ್ನು ತಪ್ಪದೇ ಪರಿಶೀಲಿಸಬೇಕು. ವಲಸೆ ಕಾರ್ಮಿಕರು ಅಲ್ಲಲ್ಲಿ ಬಿಡಾರಗಳನ್ನು ಹಾಕಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕರ ಮಕ್ಕಳಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜಾಗರೂಕರಾಗಿ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕೆಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಶನಿವಾರ ಬೆಳಿಗ್ಗೆ ಶಾಲಾ ಮಕ್ಕಳಿಂದ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಾರ್ಡ್, ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಮಾಹಿತಿ ಶಿಕ್ಷಣ ಸಂವಹನಕ್ಕೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಲಾಗಿದೆ ಎಂದರು.

ವ್ಯವಸ್ಥಾಪಕ ಮೊಹಮ್ಮದ್ ಅಲಿ ಹಬೀಬ್, ಆಶಾ ಬೋಧಕಿ ಗುರುಲಿಂಗಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್, ರಂಗಾ ರೆಡ್ಡಿ ಪ್ರವೀಣ್, ಗೋಪಾಲ ಕೃಷ್ಣ, ಗುರುಮೂರ್ತಿ, ಶ್ರೀನಿವಾಸ್ ಮಳಲಿ, ತಿಪ್ಪೇಸ್ವಾಮಿ, ಪ್ರಸನ್ನ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ