ಸಣ್ಣ ಮಳೆಗೇ ಹೊಳೆಯಾಗಿ ಮಾರ್ಪಡುವ ಪಂಪ್‌ವೆಲ್‌ ವೃತ್ತ!

KannadaprabhaNewsNetwork |  
Published : Jun 22, 2025, 11:47 PM IST
ತೋಡಿನಲ್ಲಿ ತುಂಬಿದ ಹೂಳು, ಮುಗಿಯದ ಗೋಳು  | Kannada Prabha

ಸಾರಾಂಶ

ರಾಜಕಾಲುವೆ, ಮಳೆ ನೀರು ಚರಂಡಿಯ ಅವ್ಯವಸ್ಥೆಯಿಂದಾಗಿ ಪಂಪ್‌ವೆಲ್‌ ಸಣ್ಣ ಮಳೆಗೆ ಕೆರೆಯಂತಾಗುತ್ತಿದೆ. ದೊಡ್ಡ ಕಾಲುವೆಗಳಲ್ಲಿ ಹರಿದುಬರುವ ನೀರಿಗೆ ಸಣ್ಣ ತೋಡಿನಲ್ಲಿ ದಾರಿ ಕಲ್ಪಿಸಿದ್ದರಿಂದ ನೀರು ಮುಂದೆ ಸಾಗದೆ ವೃತ್ತದ ಕಡೆಗೆ ಧಾವಿಸುತ್ತದೆ. ಹೀಗಾಗಿ ಇಡೀ ಪಂಪ್‌ವೆಲ್‌ನಲ್ಲಿ ಪ್ರವಾಹ ಸದೃಶವಾಗುತ್ತದೆ. ಆಗ ವಾಹನ ಹಾಗೂ ಪಾದಚಾರಿ ಸಂಚಾರ ದುಸ್ತರವಾಗುತ್ತದೆ.

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವಿಳ‍ಂಬ ಕಾರಣಕ್ಕೆ ಈ ಹಿಂದೆ ಬಹಳಷ್ಟು ಸುದ್ದಿಯಾಗಿದ್ದರೆ, ಈಗ ಪಂಪ್‌ವೆಲ್‌ ವೃತ್ತ ಮಳೆಗಾಲದಲ್ಲಿ ಜಲಾವೃತಗೊಂಡು ಸದಾ ಟೀಕೆಗೆ ಒಳಗಾಗುತ್ತಿದೆ. ಒಂದು ಸಣ್ಣ ಮಳೆಗೇ ಪಂಪ್‌ವೆಲ್‌ ವೃತ್ತ ಹೊಳೆಯಾಗಿ ಮಾರ್ಪಡುತ್ತಿದೆ. ಅಷ್ಟೊಂದು ಪ್ರಮಾಣದಲ್ಲಿ ಸಂಗ್ರಹವಾಗುವ ನೀರು ಹೋಗಲು ಅಲ್ಲಿ ಬೇರೆ ದಾರಿಯೇ ಇಲ್ಲ ಎನ್ನುವುದು ಅಷ್ಟೇ ಸತ್ಯ. ಭಾರಿ ಮಳೆ ಬಂದರೆ ಪಂಪ್‌ವೆಲ್‌ಗೆ ಎಲ್ಲೆಡೆಯಿಂದ ನುಗ್ಗುವ ನೀರು, ರಸ್ತೆಯ ಇಕ್ಕೆಲಗಳಲ್ಲಿ ಪೈಪ್‌ಲೈನ್‌, ಕೇಬಲ್‌ಗಳ ಭರಾಟೆ, ಮಳೆ ನೀರು ಹೋಗಲು ಇರುವುದು ಸಣ್ಣ ತೋಡು ಇದು ಸಮಸ್ಯೆಗಳ ಮೂಲಬಿಂದು.

ರಾಜಕಾಲುವೆ, ಮಳೆ ನೀರು ಚರಂಡಿಯ ಅವ್ಯವಸ್ಥೆಯಿಂದಾಗಿ ಪಂಪ್‌ವೆಲ್‌ ಸಣ್ಣ ಮಳೆಗೆ ಕೆರೆಯಂತಾಗುತ್ತಿದೆ. ದೊಡ್ಡ ಕಾಲುವೆಗಳಲ್ಲಿ ಹರಿದುಬರುವ ನೀರಿಗೆ ಸಣ್ಣ ತೋಡಿನಲ್ಲಿ ದಾರಿ ಕಲ್ಪಿಸಿದ್ದರಿಂದ ನೀರು ಮುಂದೆ ಸಾಗದೆ ವೃತ್ತದ ಕಡೆಗೆ ಧಾವಿಸುತ್ತದೆ. ಹೀಗಾಗಿ ಇಡೀ ಪಂಪ್‌ವೆಲ್‌ನಲ್ಲಿ ಪ್ರವಾಹ ಸದೃಶವಾಗುತ್ತದೆ. ಆಗ ವಾಹನ ಹಾಗೂ ಪಾದಚಾರಿ ಸಂಚಾರ ದುಸ್ತರವಾಗುತ್ತದೆ. ನಗರದ ನೀರೆಲ್ಲಾ ಇಲ್ಲಿ ಸಂಗಮ!ಮಂಗಳೂರಿನ ಕಂಕನಾಡಿ, ಬೆಂದೂರು, ಬಲ್ಮಠ, ಮರೋಳಿ, ತಾರೆತೋಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆ ನೀರು ಬಂದು ಸೇರುವುದು ಪಂಪ್‌ವೆಲ್‌ ಬಳಿ. ಅಲ್ಲಿಂದ ಒಂದೇ ರಾಜಕಾಲುವೆಯಲ್ಲಿ ಉಜ್ಜೋಡಿ, ಜಪ್ಪಿನಮೊಗರು ಮೂಲಕ ನೇತ್ರಾವತಿ ನದಿ ಸೇರುತ್ತದೆ. ಪಂಪ್‌ವೆಲ್‌ನಿಂದ ಮುಂದಕ್ಕೆ ಬಹುತೇಕ ರಾಜಕಾಲುವೆ ಉತ್ತಮ ಸ್ಥಿತಿಯಲ್ಲಿದ್ದು, ಪಂಪ್‌ವೆಲ್‌ನಲ್ಲೇ ಅವ್ಯವಸ್ಥೆಯಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾಲುವೆಯಲ್ಲಿ ಸರಾಗವಾಗಿ ಹರಿಯಬೇಕಿದ್ದ ಮಳೆ ನೀರು ಪಂಪ್‌ವೆಲ್‌ ಸಮೀಪ ರಸ್ತೆಯಲ್ಲಿ ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಅಲ್ಲಲ್ಲಿ ಪೈಪ್‌ಲೈನ್‌ ತಡೆ: ಕಂಕನಾಡಿ, ಬೆಂದೂರಿನಿಂದ ಬರುವ ರಾಜಕಾಲುವೆ ಹಾಗೂ ಮರೋಳಿ, ತಾರೆತೋಟದಿಂದ ಬರುವ ರಾಜಕಾಲುವೆ ಪಂಪ್‌ವೆಲ್‌ ಬಳಿ ಸಂಗಮವಾಗುತ್ತದೆ. ಅಲ್ಲಿ ಅಗಲವಾಗಿದ್ದರೂ ಮುಂದಕ್ಕೆ ಗಾತ್ರ ಕಿರಿದಾಗಿದೆ. ಸೇತುವೆಯ ತಳ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ವಿವಿಧ ಅಡೆತಡೆಗಳಿವೆ. ತುಂಬೆಯಿಂದ ಬರುವ ನೀರಿನ ಮುಖ್ಯ ಪೈಪ್‌ಲೈನ್‌ ಸೇತುವೆ ತಳ ಭಾಗದಿಂದ ತೆರಳಿದ್ದು, ಬಹುತೇಕ ಜಾಗ ಅತಿಕ್ರಮಿಸಿದೆ. ಇದರ ಜತೆಗೆ ಮರೋಳಿ, ಉಜ್ಜೋಡಿ ಸೇರಿದಂತೆ ಪಂಪ್‌ವೆಲ್‌ ಪ್ರದೇಶಕ್ಕೆ ನೀರು ರವಾನೆಯಾಗುವ ಪೈಪ್‌ಗಳು ಹಾದುಹೋಗಿವೆ. ಪೈಪ್‌ಗೆ ಆಧಾರವಾಗಿ ಕಾಲುವೆಯಲ್ಲೇ ಪಿಲ್ಲರ್‌ ಅಳವಡಿಸಲಾಗಿದೆ. ಇದರ ಹೊರತಾಗಿ ವಿವಿಧ ಕೇಬಲ್‌ಗಳನ್ನು ಕಾಲುವೆಗೆ ಅಡ್ಡಲಾಗಿ ಅಳವಡಿಸಲಾಗಿದೆ. ಇವುಗಳಲ್ಲಿ ತೆಂಗಿನ ಗರಿ, ಇತರ ಕಸ ಕಡ್ಡಿಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸಿಲುಕಿಕೊಂಡು ನೀರಿನ ಸರಾಗವಾದ ಹರಿವಿಗೆ ತಡೆಯಾಗಿದೆ. ಇದರೊಂದಿಗೆ ಎಲ್ಲೆಂದರಲ್ಲಿ ಕಟ್ಟಡ, ಕಾಂಕ್ರಿಟ್‌ ರಸ್ತೆ ನಿರ್ಮಾಣದಿಂದ ಭೂಮಿಯೊಳಗೆ ನೀರು ಇಂಗದೆ, ನಿರಂತರವಾಗಿ ಹರಿದುಬಂದು ನೆರೆ ಉಂಟಾಗುತ್ತಿದೆ.

ರಾಜಕಾಲುವೆ ಅತಿಕ್ರಮಣ, ರಸ್ತೆ ಬದಿ ಹೂಳು ರಾಶಿ ಪಂಪ್‌ವೆಲ್‌ ರಾಜಕಾಲುವೆಗೆ ಪಂಪ್‌ವೆಲ್‌ ಜಂಕ್ಷನ್‌ನಲ್ಲೇ ಮಣ್ಣು ತುಂಬಿಸಲಾಗಿದೆ. ಬಹುತೇಕ ಭಾಗವನ್ನು ಒತ್ತುವರಿ ಮಾಡಲಾಗಿದೆ. ಮುಖ್ಯರಸ್ತೆಗೆ ತಾಗಿಕೊಂಡೇ ಅತಿಕ್ರಮಣವಾಗಿದ್ದರೂ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಂಡಿಲ್ಲ.ಈ ಬಾರಿ ಅವಧಿಗೂ ಮುನ್ನವೇ ಮಳೆಯಾಗಿದೆ. ಹೀಗಾಗಿ ಮಳೆಗಾಲಕ್ಕೆ ಮುನ್ನ ರಾಜಕಾಲುವೆಗಳಿಂದ ಹೂಳೆತ್ತದೇ ಇರುವುದೇ ಅಧ್ವಾನಕ್ಕೆ ಇನ್ನೊಂದು ಕಾರಣ. ಈ ಹಿಂದೆ ಮಳೆಗಾಲದಲ್ಲಿ ಸಾಧಾರಣ ಮಳೆಯಾದಾಗ ನೀರು ಸರಾಗವಾಗಿ ಹರಿಯುತ್ತಿತ್ತು. ಆದರೆ ಈ ಬಾರಿ ಪಂಪ್‌ವೆಲ್‌ ಸುತ್ತಮುತ್ತ ಹೂಳೆತ್ತುವ ಕೆಲಸವಾಗಿಲ್ಲ. ಸಹಜವಾಗಿಯೇ ನೀರಿಗೆ ಜಾಗವಿಲ್ಲದೆ ಮಳೆನೀರು ರಸ್ತೆಗೆ ಬರುತ್ತಿದೆ.

ಇದಲ್ಲದೆ ಪಂಪ್‌ವೆಲ್‌-ಎಕ್ಕೂರು ಸರ್ವಿಸ್‌ ರಸ್ತೆ ಪಕ್ಕದಲ್ಲಿ ದೊಡ್ಡ ಗಾತ್ರದ ಕಾಲುವೆ ಇದ್ದರೂ, ಅದರಲ್ಲಿ ಚರಂಡಿ ತ್ಯಾಜ್ಯ ಮಾತ್ರವೇ ಹರಿಯುತ್ತಿದ್ದು, ಮಳೆ ನೀರು ಹರಿಯುತ್ತಿಲ್ಲ. ತೋಡಿನಿಂದ ತೆರವುಗೊಳಿಸಿದ ಹೂಳನ್ನು ರಸ್ತೆಬದಿಯಲ್ಲಿ ರಾಶಿ ಹಾಕಲಾಗಿರುವುದು. ಮತ್ತೊಂದೆಡೆ ರಸ್ತೆಯ ವಿರುದ್ಧ ದಿಕ್ಕಿನಿಂದ ನೀರು ಈ ಕಾಲುವೆಯನ್ನು ಸಂಪರ್ಕಿಸಲು ಮೋರಿಯ ವ್ಯವಸ್ಥೆ ಇಲ್ಲ. ಪಂಪ್‌ವೆಲ್‌ನಿಂದ ಪಡೀಲ್‌ ತೆರಳುವ ರಸ್ತೆಯಲ್ಲಿ ರಾಜಕಾಲುವೆ ಹಾದುಹೋಗಿದ್ದು, ಅಲ್ಲಿಯೂ ಕೂಡ ಗಾತ್ರ ಕಿರಿದಾಗಿದೆ. ಮಾತ್ರವಲ್ಲ ಅದರಲ್ಲಿ ಹಲವಾರು ಪೈಪ್‌ಗಳ ರಾಶಿಯೇ ತುಂಬಿದೆ. ಅದರ ನಡುವೆ ನೀರು ಹರಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ.

ಬಾಕ್ಸ್‌----

ವೈಜ್ಞಾನಿಕ ಸಲಹೆ ಏನು?

ಪಂಪ್‌ವೆಲ್‌ನಲ್ಲಿ ಕೃತಕ ನೆರೆ ಆವರಿಸಲು ಕಾರಣವಾಗುವ ಅಂಶಗಳನ್ನು ಗಮನ ಹರಿಸಿ ಸರಿಪಡಿಸಬೇಕು ಎಂದು ಸುರತ್ಕಲ್‌ ಎನ್‌ಐಟಿಕೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಂಪ್‌ವೆಲ್‌ ಸುತ್ತಮುತ್ತ ನಿಯಮಿತವಾಗಿ ಹೂಳೆತ್ತುವುದು, ಪಂಪ್‌ವೆಲ್‌ ಸರ್ವಿಸ್‌ ರಸ್ತೆಯ ಬಳಿ ಕಿರಿದಾಗಿರುವ ಒಳಚರಂಡಿ ಗಾತ್ರವನ್ನು ಇಮ್ಮಡಿಗೊಳಿಸಬೇಕು. ಪಂಪ್‌ವೆಲ್‌ ಪಡೀಲ್‌ ರಸ್ತೆಯಲ್ಲಿ ರಾಜಕಾಲುವೆಯಲ್ಲಿರುವ ನೀರಿನ ಕೊಳವೆಯನ್ನು ಮೇಲ್ಭಾಗದಿಂದ ರವಾನಿಸುವುದು. ಸೇತುವೆ ಕೆಳಗೆ ಕಾಲುವೆಗೆ ಅಡ್ಡಲಾಗಿರುವ ಪೈಪ್‌ಗಳು, ಕೇಬಲ್‌ಗಳನ್ನು ತೆರವುಗೊಳಿಸುವುದು. ಸೇತುವೆಯ ತಳದಲ್ಲಿ ಸಂಗ್ರಹವಾಗುವ ಹೂಳು ತೆಗೆಯುವುದು. ಫ್ಲೈ ಓವರ್‌ ತಳದಲ್ಲಿ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಮಾಡುವುದು ಇತ್ಯಾದಿ ಸಲಹೆ ಮಾಡಲಾಗಿದೆ. ಆದರೆ ಇದಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಷ್ಟೆ ಪ್ರಮುಖ ರಾಜಕಾಲುವೆಯ ಹೂಳೆತ್ತಲು ಆರಂಭಿಸಲಾಗಿದೆ.......................ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಪ್ಪಿನಿಂದಾಗಿ ಇಲ್ಲಿ ಸಮಸ್ಯೆ ಉದ್ಭವವಾಗಿದೆ. ಇಕ್ಕೆಲಗಳಲ್ಲಿ ಸರ್ವೀಸ್‌ ರಸ್ತೆ ಹಾಗೂ ಸಣ್ಣ ಸೇತುವೆಯನ್ನು ಎತ್ತರಿಸಬೇಕು. ರಾಜಕಾಲುವೆಯ ಒತ್ತುವರಿ ತೆರವುಗೊಳಿಸಬೇಕು. ಪಡೀಲು ಕಡೆಗೆ ಭೂಗತವಾಗಿ ಅಳವಡಿಸಿದ ಎಲ್ಲ ಬಗೆಯ ಪೈಪ್‌ಲೈನ್‌, ಕೇಬಲ್‌ಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಡ್ರೈನೇಜ್‌ ಹೂಳುತೆಗೆಯಬೇಕು. ಹೀಗಾದರೆ ಸ್ವಲ್ಪ ಮಟ್ಟಿಗೆ ಪಂಪ್‌ವೆಲ್‌ ಮುಳುಗಡೆ ನಿವಾರಿಸಬಹುದು.

-ಜಿ.ಕೆ.ಭಟ್‌, ಸಾಮಾಜಿಕ ಕಾರ್ಯಕರ್ತರು.ಪಂಪ್‌ವೆಲ್‌ ಮುಳುಗಡೆ ತೊಂದರೆ ನಿವಾರಿಸಲು ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಚರಂಡಿಯ ಹೂಳು ತೆಗೆಯುವ ಕಾರ್ಯ ಆರಂಭಿಸಿದೆ. ಇಲ್ಲಿ ಸರ್ವೀಸ್‌ ರಸ್ತೆ ಅಗಲಗೊಳಿಸಿ, ಎತ್ತರಿಸಿ, ಸಮರ್ಪಕ ಚರಂಡಿ ರಚನೆಗೆ ಸಮಾರು 15 ಕೋಟಿ ರು.ಗಳ ಪಾಲಿಕೆ ನಿಧಿಯನ್ನು ಬಳಸಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಶೇ.70ರಷ್ಟು ಮುಳುಗಡೆ ಸಮಸ್ಯೆ ನಿವಾರಣೆಯಾದೀತು.

-ಸಂದೀಪ್‌ ಗರೋಡಿ, ಪಾಲಿಕೆಯ ಸ್ಥಳೀಯ ಮಾಜಿ ಸದಸ್ಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ