ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಬನ್ನೂರು, ಅಂಡವಾನೆ ಗ್ರಾಮದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನಲ್ಲಿ ಎರಡು ದಿನಗಳ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯ ಹೇರಿದ್ದರು.
ಸಾರ್ವಜನಿಕರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುಂಡಾನೆಯ ಸೆರೆ ಹಿಡಿಯಲು ಅಧಿಕಾರಿಗಳಿಗೆ ಆದೇಶ ನೀಡಿಸಿದ್ದರು. ಸೋಮವಾರ ಮಧ್ಯಾಹ್ನವೇ ಬಾಳೆಹೊನ್ನೂರಿಗೆ ಸಕ್ರೇಬೈಲಿನಿಂದ ೪ ಕುಮ್ಕಿ ಆನೆಗಳನ್ನು ತರಲಾಗಿತ್ತು. ಮಂಗಳವಾರ ಬೆಳಿಗ್ಗೆ ಮತ್ತೊಂದು ಆನೆಯನ್ನು ಕರೆಯಿಸಿಕೊಳ್ಳಲಾಗಿತ್ತು.ಅರಣ್ಯ ಇಲಾಖೆಯ ಸಂಪ್ರದಾಯದಂತೆ ಮಂಗಳವಾರ ಬೆಳಿಗ್ಗೆ ಕುಮ್ಕಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆನೆ ಸೆರೆ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಇಬ್ಬರನ್ನು ಬಲಿ ಪಡೆದ ಪುಂಡಾನೆ ಬನ್ನೂರು ಗ್ರಾಮದ ಬಳಿಯಲ್ಲಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೂ ಬಂದಿತ್ತು. ಅಲ್ಲಿಗೆ ಕುಮ್ಕಿ ಆನೆಗಳನ್ನು ಕರೆಯಿಸಿಕೊಂಡ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.
ಆತ್ಮವಿಶ್ವಾಸ ಕಳೆದುಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು, ಶಾರ್ಪ್ ಶೂಟರ್ ಮಧ್ಯಾಹ್ನದ ವೇಳೆಗೆ ಪುನಃ ಕಾರ್ಯಾಚರಣೆ ಆರಂಭಿಸಿದ್ದು, ಅಂಡವಾನೆ ಗ್ರಾಮದ ಬಳಿ ಪುನಃ ಕಂಡುಬಂದ ಪುಂಡಾನೆಗೆ ಎರಡನೇ ಬಾರಿಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಚುಚ್ಚುಮದ್ದು ಬೀಳುತ್ತಿದ್ದ ಪುನಃ ರೊಚ್ಚಿಗೆದ್ದ ಆನೆ ರಭಸವಾಗಿ ಓಡುತ್ತ ಬಿಳುಕೊಪ್ಪ ಗ್ರಾಮದ ಬಸವನಕೋಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಂದು ಸಂಜೆ ವೇಳೆಗೆ ಪ್ರಜ್ಞಾಹೀನವಾಗಿ ಬಿದ್ದಿತು.
ಸಂಜೆ ಐದು ಗಂಟೆಯ ವೇಳೆಗೆ ಪುಂಡಾನೆ ಸೆರೆ ಸಿಕ್ಕರೂ ಸಹ ಅದನ್ನು ಅರಣ್ಯ ಪ್ರದೇಶದಿಂದ ಹೊರ ತರಲು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಬೇಕಾಯಿತು. ಪುಂಡಾನೆಯು ನಾಲ್ಕು ಕುಮ್ಕಿ ಆನೆಗಳಿಗೂ ಬಗ್ಗದೆ ತನ್ನ ಪುಂಡಾಟವನ್ನು ಮೆರೆಸಿತ್ತು.
ಪುಂಡಾನೆ ಸೆರೆಗೆ ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಸೋಮಣ್ಣ, ಬಹದ್ದೂರ್, ಬಾಲಣ್ಣ ಎಂಬ ಗಂಡಾನೆ ಹಾಗೂ ಭಾನುಮತಿ ಎಂಬ ಹೆಣ್ಣಾನೆಯನ್ನು ಕರೆಯಿಸಿಕೊಳ್ಳಲಾಗಿತ್ತು. ಗಂಡಾನೆಗಳು ಪುಂಡಾನೆಯ ಸೆರೆ ಹಾಗೂ ಅದರ ಪುಂಡಾಟವನ್ನು ನಿಗ್ರಹಿಸುವಲ್ಲಿ ಕಾರ್ಯನಿರ್ವಹಿಸಿದರೆ, ಹೆಣ್ಣಾನೆ ಪುಂಡಾಟ ನಡೆಸುವ ಗಂಡಾನೆಯನ್ನು ಬಲೆಗೆ ಬೀಳಿಸುವ ಕಾರ್ಯವನ್ನು ನಡೆಸಲಿದೆ.
ಬಿಳುಕೊಪ್ಪ ಗ್ರಾಮದಲ್ಲಿ ಸೆರೆ ಸಿಕ್ಕ ಪುಂಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆಯ ಸಿಸಿಎಫ್ ಯಶ್‌ಪಾಲ್ ತಿಳಿಸಿದ್ದಾರೆ.
ಶಾಸಕ ರಾಜೇಗೌಡ ಹರ್ಷ
ಆನೆಗಳನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಮೂಲಕ ಒತ್ತಾಯ ಹೇರಿದ್ದೆ. ಅದಕ್ಕೆ ಅರಣ್ಯ ಸಚಿವರು ಹಾಗೂ ಸರ್ಕಾರ ಸ್ಪಂದಿಸಿತ್ತು. ಈ ಭಾಗದಲ್ಲಿ ಇನ್ನೂ ಒಂದು ಪುಂಡಾನೆ ಇರುವ ಮಾಹಿತಿಯಿದ್ದು ಅದನ್ನು ಸೆರೆ ಹಿಡಿಯಲು ನಾಳೆಯೊಳಗೆ ಆದೇಶ ಮಾಡಿಸಲಾಗುವುದು ಎಂದರು.
ಪುಂಡಾನೆ ವೀಕ್ಷಣೆಗೆ ಜಮಾಯಿಸಿದ ಜನಪುಂಡಾನೆ ಸೆರೆ ಸಿಕ್ಕ ಮಾಹಿತಿ ದೊರೆಯುತ್ತಿದ್ದಂತೆ ಅದರ ವೀಕ್ಷಣೆಗೆ ಬಾಳೆಹೊನ್ನೂರು, ಖಾಂಡ್ಯ, ಕಡಬಗೆರೆ, ಸಂಗಮೇಶ್ವರಪೇಟೆ, ಹುಯಿಗೆರೆ, ಮಾಗುಂಡಿ ಮುಂತಾದ ಕಡೆಗಳಿಂದ ಸಾವಿರಾರು ಸಂಖ್ಯೆಯ ಜನರು ಎಲೆಕಲ್ಲು ಮೀಸಲು ಅರಣ್ಯ ಪ್ರದೇಶ ಬಳಿ ಜಮಾಯಿಸಿದ್ದರು. ಪರಿಣಾಮ ಮುಖ್ಯರಸ್ತೆ ಸಂಚಾರ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಿಂದ ತೊಂದರೆಗೀಡಾಗಿತ್ತು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಎಲೆಕಲ್ಲು-ಅಂಡವಾನೆ ರಸ್ತೆಯ ಮಾರ್ಗವನ್ನು ಪೊಲೀಸರು ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧಿಸಿದ್ದರು. ಮುಂಜಾಗರೂಕ ಕ್ರಮವಾಗಿ ಕೆಎಸ್‌ಆರ್‌ಪಿ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪುಂಡಾನೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಕ್ಷೇತ್ರದ ಪ್ರವಾಸದಲ್ಲಿದ್ದ ಶಾಸಕ ರಾಜೇಗೌಡ ಪ್ರವಾಸ ಮೊಟಕುಗೊಳಿಸಿ ಸ್ಥಳಕ್ಕೆ ಭೇಟಿ ನೀಡಿದರು.