ಖೋಟಾ ನೋಟು ನೀಡಿ ಪುಣೆ ಮಹಿಳೆಗೆ ವಂಚನೆ: ವ್ಯಕ್ತಿಯ ಬಂಧನ

KannadaprabhaNewsNetwork |  
Published : Jun 12, 2025, 02:00 AM IST
ನಕಲಿ ನೋಟು | Kannada Prabha

ಸಾರಾಂಶ

ಮೈಸೂರು ಮೂಲದ ಮಹಮ್ಮದ ಆಸೀಫ್‌ ಅಲಿಯಾಸ್‌ ಸುಧೀರ ಮೆಹ್ತಾ ಎಂಬಾತನೇ ಬಂಧಿತ ವಂಚಕ. ಪುಣೆ ಮೂಲದ ಅಶ್ವಿನಿ ಎಂಬುವವರಿಗೆ ಕನಸ್ಟ್ರಕ್ಷನ್‌ ಕಂಪನಿ ತೆರೆಯಲು ₹50 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.

ಹುಬ್ಬಳ್ಳಿ: ₹50 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ಅಸಲಿ ನೋಟು ಪಡೆದು ₹1.87 ಕೋಟಿ ಕೋಟಾ ನೋಟು (ಆಟಿಕೆಯ ನೋಟು) ನೀಡಿ ವಂಚಿಸಿದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

₹1.87 ಕೋಟಿಗಳಲ್ಲಿ ₹5 ಸಾವಿರ ಮಾತ್ರ ಅಸಲಿ ನೋಟು. ಉಳಿದ ಎಲ್ಲ ನೋಟುಗಳು ಮಕ್ಕಳು ಆಟವಾಡಲು ಬಳಸುವ, ಬುಕ್‌ಸ್ಟಾಲ್‌ಗಳಲ್ಲಿ ಸಿಗುವ ನಕಲಿ ನೋಟುಗಳೇ ಆಗಿವೆ.

ಮೈಸೂರು ಮೂಲದ ಮಹಮ್ಮದ ಆಸೀಫ್‌ ಅಲಿಯಾಸ್‌ ಸುಧೀರ ಮೆಹ್ತಾ ಎಂಬಾತನೇ ಬಂಧಿತ ವಂಚಕ. ಪುಣೆ ಮೂಲದ ಅಶ್ವಿನಿ ಎಂಬುವವರಿಗೆ ಕನಸ್ಟ್ರಕ್ಷನ್‌ ಕಂಪನಿ ತೆರೆಯಲು ₹50 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಗಿದ್ದೇನು?: ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ.

ಅಶ್ವಿನಿ ಅವರು ಕಳೆದ ವಾರ ಮೈಸೂರಿಗೆ ಸಂಬಂಧಿಕರೊಬ್ಬರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುಣೆಯಿಂದ ತೆರಳಿದ್ದರು. ಅಲ್ಲಿ ಮಹಮ್ಮದ ಆಸೀಫ್‌ ಪರಿಚಯನಾಗಿದ್ದ. ಆಗ ಅಶ್ವಿನಿ ಅವರಿಗೆ ತಾನು ಸುಧೀರ ಮೆಹ್ತಾ ಎಂದು ಪರಿಚಯ ಮಾಡಿಕೊಂಡಿದ್ದ.

ಅಶ್ವಿನಿ ಅವರು ತಮ್ಮ ಮಗಳ ಹೆಸರಲ್ಲಿ ಕನಸ್ಟ್ರಕ್ಷನ್‌ ಕಂಪನಿ ತೆರೆಯಬೇಕಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ, ಇದಕ್ಕಾಗಿ ಸಾಲ ಪಡೆಯಬೇಕಿದೆ ಎಂದು ತಿಳಿಸಿದ್ದರು. ಆಗ ಆಸೀಫ್‌, ತನಗೆ ಫೈನಾನ್ಸ್‌ ಕಂಪನಿ ಮಾಲೀಕರು ಪರಿಚಯವಿದ್ದಾರೆ. ಅವರಿಗೆ ಹೇಳಿ ₹50 ಕೋಟಿ ಲೋನ್‌ ಕೊಡಿಸುವುದಾಗಿ ನಂಬಿಸಿದ್ದಾನೆ. ಬಳಿಕ ಲೋನ್‌ ಪಡೆಯುವ ಪ್ರಕ್ರಿಯೆಗೆ ಹಣ ಬೇಕಾಗುತ್ತದೆ ಎಂದು ನಂಬಿಸಿ ಹಂತ ಹಂತವಾಗಿ ಅಶ್ವಿನಿ ಅವರಿಂದ ₹60 ಲಕ್ಷ ಪಡೆದಿದ್ದಾನೆ. ಜತೆಗೆ ಮೊದಲ ಹಂತವಾಗಿ ಲೋನ್‌ ಅಮೌಂಟ್‌ ₹1.87 ಕೋಟಿ ನೀಡುತ್ತೇನೆ. ಮುಂದೆ ಉಳಿದ ಹಣವನ್ನು ನೀಡುತ್ತೇನೆ ಎಂದು ತಿಳಿಸಿದ್ದಾನೆ. ಅದಕ್ಕೆ ಅಶ್ವಿನಿ ಒಪ್ಪಿಕೊಂಡಿದ್ದಾರೆ.

ಅದರಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಶ್ವಿನಿ ಅವರನ್ನು ಕರೆಯಿಸಿಕೊಂಡ ಆಸೀಫ್‌, ಅವರಿಗೆ ಹಣವಿರುವ ಎರಡು ಬ್ಯಾಗ್‌ ನೀಡಿದ್ದಾನೆ. ಅಶ್ವಿನಿ ಅವರು ಬ್ಯಾಗ್ ತೆರೆದು ನೋಡಿದಾಗ ಹಣದ ಕಂತೆಯ ಮೇಲೆ ನೈಜ ಹಣವಿದೆ. ಕೆಳಗೆಲ್ಲ ಮಕ್ಕಳ ಆಟಿಕೆಗೆ ಬಳಸುವ ನಕಲಿ ನೋಟುಗಳಿರುವುದು ಪತ್ತೆಯಾಗಿದೆ.

ಕೂಡಲೇ ವಿದ್ಯಾನಗರ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿ ಮುರುಡೇಶ್ವರದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ಅಲ್ಲಿ ದಾಳಿ ನಡೆಸಿ ಬಂಧಿಸಿಕೊಂಡು ಬಂದಿದ್ದಾರೆ.

ಇನ್ಸ್‌ಪೆಕ್ಟರ್ ಗೌಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ತಿಳಿಸಿದರು.

ಎಲ್ಲಿ ಪ್ರಿಂಟ್‌?: ಕೋಟಾ ನೋಟಿನ ಕಂತೆಯನ್ನು ನೀಡಿದ್ದಾನೆ. ತಮಿಳುನಾಡಿನ ನಗರವೊಂದರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಅವುಗಳನ್ನು ಪ್ರಿಂಟ್ ಮಾಡಿಸಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಹಿಳೆಯಿಂದ ಪಡೆದ ಹಣ ವಶಕ್ಕೆ ಪಡೆಯಬೇಕಿದೆ ಎಂದು ಕಮಿಷನರ್‌ ತಿಳಿಸಿದ್ದಾರೆ.ವ್ಯವಹಾರಸ್ಥನಂತೆ: ಆರೋಪಿ ಆಸೀಫ್‌ ಸೂಟು ಬೂಟು ಹಾಕಿಕೊಂಡು ಸಭ್ಯ ವ್ಯವಹಾರಸ್ಥನಂತೆ ಕಾಣುತ್ತಾನೆ. ಕನ್ನಡ, ಹಿಂದಿ ಭಾಷೆಯನ್ನು ಚೆನ್ನಾಗಿ ಬಲ್ಲವನಾಗಿದ್ದು, ಹೊಸಬರು ಪರಿಚಯವಾದಾಗ, ನಕಲಿ ಹೆಸರಿನಿಂದ ಪರಿಚಯಿಸಿಕೊಂಡು ಗುರುತು ಪತ್ರ ತೋರಿಸುತ್ತಿದ್ದ. ಎಲ್ಲಿಯೂ ಸಿಕ್ಕಿಹಾಕಿಕೊಳ್ಳಬಾರದೆಂದು, ಒಬ್ಬರ ಜೊತೆ ವ್ಯವಹಾರ ನಡೆಸಿದ ನಂತರ ಮೊಬೈಲ್ ಸಂಖ್ಯೆಯನ್ನು ಬಿಸಾಡುತ್ತಿದ್ದ. ಅದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಇಟ್ಟುಕೊಂಡಿದ್ದ ಎಂದು ವಿವರಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ಅದರ ಆರೋಪಿ ಸಹ ಮಹ್ಮದ್ ಆಸೀಫ್‌ ಎಂದೇ ಹೆಸರಿತ್ತು. ಪೊಲೀಸರು ಬಂಧಿಸಿ ವಿಚಾರಣೆ ನಡೆಸುವಾಗ, ಆತ್ಮಹತ್ಯೆಗೆ ಯತ್ನಿಸಿದ್ದ. ಆದ್ದರಿಂದ ಈತನನ್ನು ಎಚ್ಚರಿಕೆಯಿಂದ ವಿಚಾರಣೆ ಮಾಡಲಾಗುತ್ತಿದೆ ಎಂದು ಕಮಿಷನರ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ