ರಂಭಾಪುರಿ ಪೀಠಕ್ಕೆ ಭೇಟಿ ನೀಡಿದಾಗ ಸುದ್ದಿಗಾರಿರಗೆ ಮಾಹಿತಿ । ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳಿಂದ ಆಶೀರ್ವಾದ
ರಾಜ್ಯದಲ್ಲಿ ಜಾತಿ ಗಣತಿಯನ್ನು ಮರು ಸಮೀಕ್ಷೆ ಮಾಡುವ ಕುರಿತು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.ಕೆಲವು ಸಮಾಜಗಳ ಮುಖ್ಯಸ್ಥರು, ಮಠಾಧೀಶರು ಜಾತಿ ಗಣತಿ ಪುನಃ ಸಮೀಕ್ಷೆ ಆಗಬೇಕು. ಹಳೆಯ ಗಣತಿ ಹತ್ತು ವರ್ಷ ಆಗಿದೆ ಎಂಬ ದೂರು ಇತ್ತು. ಆ ಬೇಡಿಕೆ ಪರಿಗಣಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತಿತರರು ಸಲಹೆ ನೀಡಿದ್ದಾರೆ. ಎಐಸಿಸಿ ಹೈಕಮಾಂಡ್ ಜಾತಿ ಗಣತಿ ಯಾವ ರೀತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಅಷ್ಟೆ. ಆ ಸಲಹೆ ಪರಿಗಣಿಸಿ, ಗುರುವಾರದ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಮರು ಸಮೀಕ್ಷೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಂಭಾಪುರಿ ಪೀಠದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಮರು ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಈಗಾಗಲೇ ಒಳಮೀಸಲಾತಿಗಾಗಿ ಒಂದು ಗಣತಿ ನಡೆದಿದೆ. ಅದೇ ರೀತಿ ಕೆಲವೇ ದಿನಗಳಲ್ಲಿ ಮರು ಸಮೀಕ್ಷೆ ನಡೆಸಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಗಣತಿ ನಡೆಸುವ ಕಾರ್ಯ ಮಾಡಲಾಗುವುದು ಎಂದರು.ಕೇಂದ್ರದ ಜಾತಿ ಗಣತಿ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಪ್ರಕಟಣೆ ಮಾಡಿದ್ದಾರೆ. 2027ರಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೆ ಇನ್ನೂ ಸಹ ಸಮಯ ಇದೆ. ಆದ್ದರಿಂದ ನಾವು ನಿಗದಿತ ಕಾಲಮಿತಿಯೊಳಗೆ ಜಾತಿ ಗಣತಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.-- (ಬಾಕ್ಸ್) --
ಕಾಲ್ತುಳಿತ ಪ್ರಕರಣದಲ್ಲಿ ರಾಜಕಾರಣ ಸರಿಯಲ್ಲ ಬೆಂಗಳೂರು ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆಗೆ ರಾಜಕಾರಣ ಬಳಸುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಅಮಾಯಕರು ಇದರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. ಯಾವ ರೀತಿ ಲೋಪವಾಗಿದೆ ಎಂಬ ಬಗ್ಗೆ ತನಿಖೆಯೂ ಆರಂಭವಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಘಟನೆ ಬಗ್ಗೆ ಏನು ಮಾಡಬೇಕು ಎಂದು ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ನಡೆಯದ ಹಾಗೆ ಯಾವ ಕ್ರಮಕೈಗೊಳ್ಳಬೇಕು ಎಂಬುದನ್ನು ಸಹ ಸರ್ಕಾರ ಯೋಚಿಸು ತ್ತಿದೆ. ಆದರೆ ಎಲ್ಲ ವಿಷಯಗಳಲ್ಲೂ ಜನರನ್ನು ದಾರಿ ತಪ್ಪಿಸುವ ಕೆಲಸ ವಿರೋಧ ಪಕ್ಷಗಳು ಮಾಡುತ್ತಿವೆ.ನಾವು ಇಲ್ಲಿ ಘಟನೆ ನಡೆದಿರುವ ಬಗ್ಗೆ ಪಾರದರ್ಶಕವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾದಾಗ ಎಷ್ಟು ಸಾವಿರ ಜನ ಸಾವನ್ನಪ್ಪಿದರು ಎಂಬುದು ಮಾಧ್ಯಮಗಳಿಗೂ ಸಹ ಮಾಹಿತಿ ಸಿಗಲಿಲ್ಲ. ಅಲ್ಲಿನ ಸರ್ಕಾರ ಎಲ್ಲವೂ ಕೂಡ ಮರೆಮಾಚಿ ಮುಚ್ಚಿ ಹಾಕಿದೆ. ಆಗ ಯಾರ ಮೇಲೆ ಕ್ರಮ ಆಗಿದೆ. ಇಂತಹ ಘಟನೆಗಳಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕಾರಣ ಬೆರೆಸಲು ಹೋಗಬಾರದು. ಯಾವುದೇ ಸರ್ಕಾರವಿರಲಿ, ಯಾರೇ ಇರಲಿ ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಇದ್ದವರು ಅದರ ಹೊಣೆ ಹೊರುತ್ತಾರೆ. ಇಂತಹ ಘಟನೆ ಆದ ತಕ್ಷಣ ಮುಖ್ಯಮಂತ್ರಿ, ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಎಂದು ಕೇಳಿದರೆ ಅದಕ್ಕೆ ಅರ್ಥವಿರಲ್ಲ. ಪಹಲ್ಗಾಮ್ ಘಟನೆ ಆಗಿದ್ದು ಭದ್ರತೆ ವೈಫಲ್ಯದಿಂದ. ಆಗ ನಾವು ಪ್ರಧಾನಿಗಳ ರಾಜೀನಾಮೆ ಕೇಳಿಲ್ಲ. ಅದರ ಬದಲು ಕಾಂಗ್ರೆಸ್ ದೇಶದ ಜೊತೆ ನಿಂತಿದೆ. ಒಗ್ಗಟ್ಟಾಗಿ ಈ ಘಟನೆ ಖಂಡಿಸಬೇಕು ಎಂದು ನಾವು ಹೇಳಿದ್ದೆವು. ಬಿಜೆಪಿಯವರ ತಲೆಯಲ್ಲಿ ದಿನದ 24 ಗಂಟೆಯೂ ರಾಜಕಾರಣ ಓಡುತ್ತಿರುತ್ತದೆ. ಜನಹಿತದ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂದರು.ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಜಾನ್ ಡಿಸೋಜಾ, ಕಾಂಗ್ರೆಸ್ ವಕ್ತಾರ ಹಿರಿಯಣ್ಣ, ಬಿ.ಸಿ.ಸಂತೋಷ್‌ಕುಮಾರ್ ಮತ್ತಿತರರು ಹಾಜರಿದ್ದರು.-- (ಬಾಕ್ಸ್) --
ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವದಿಸಿದರು. ಡಾ.ಕೆ.ಪಿ.ಅಂಶುಮಂತ್, ರವಿಚಂದ್ರ, ಅರುಣೇಶ್, ಮಧುಸೂದನ್, ಹಿರಿಯಣ್ಣ ಇದ್ದರು.