ಪುನೀತ್‌ ರಾಜಕುಮಾರ್‌ ದೇವಸ್ಥಾನ ಕಟ್ಟಿಸಿದ ಅಭಿಮಾನಿ

KannadaprabhaNewsNetwork |  
Published : Sep 02, 2024, 02:01 AM ISTUpdated : Sep 02, 2024, 02:02 AM IST
1ಎಚ್‌ವಿಆರ್‌1- | Kannada Prabha

ಸಾರಾಂಶ

ಇಲ್ಲೊಬ್ಬ ಪುನೀತ್‌ ರಾಜಕುಮಾರ್‌ ಅವರಿಗಾಗಿ ದೇವಸ್ಥಾನವನ್ನೇ ಕಟ್ಟಿಸಿ ಅಭಿಮಾನ ಮೆರೆದಿದ್ದಾರೆ. ಹತ್ತಾರು ಲಕ್ಷ ರು. ಖರ್ಚು ಮಾಡಿ ಪುನೀತ್‌ ಪುತ್ಥಳಿ, ದೇವಸ್ಥಾನ ನಿರ್ಮಿಸಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.

ಹಾವೇರಿ: ಇಲ್ಲೊಬ್ಬ ಪುನೀತ್‌ ರಾಜಕುಮಾರ್‌ ಅವರಿಗಾಗಿ ದೇವಸ್ಥಾನವನ್ನೇ ಕಟ್ಟಿಸಿ ಅಭಿಮಾನ ಮೆರೆದಿದ್ದಾರೆ. ಹತ್ತಾರು ಲಕ್ಷ ರು. ಖರ್ಚು ಮಾಡಿ ಪುನೀತ್‌ ಪುತ್ಥಳಿ, ದೇವಸ್ಥಾನ ನಿರ್ಮಿಸಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.

ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಪ್ರಕಾಶ ಮರಬದ ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಪುನೀತ್‌ ದೇವಸ್ಥಾನ ಕಟ್ಟಿಸುತ್ತಿರುವ ಅಭಿಮಾನಿ. ಡಾನ್ಸ್ ಮಾಸ್ಟರ್‌ ಆಗಿರುವ ಪ್ರಕಾಶ ಅವರಿಗೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್ ಎಂದರೆ ಅಚ್ಚುಮೆಚ್ಚು.

ನಟ ಪುನೀತ್‌ ಅವರನ್ನು ಭೇಟಿಯಾಗಬೇಕು, ಅವರೊಂದಿಗೆ ನಟಿಸಬೇಕು ಎಂಬುದು ಪ್ರಕಾಶ್ ಕಂಡ ಕನಸಾಗಿತ್ತು. ಈ ಕುರಿತು ಹಲವು ಬಾರಿ ಪುನೀತ್ ಭೇಟಿಗೆ ತೆರಳಿದ್ದರೂ ಸಾಧ್ಯವಾಗಿರಲಿಲ್ಲ.ಅವರನ್ನು ಭೇಟಿಯಾಗುವ ಅವಕಾಶ ಪ್ರಕಾಶ್‌ ಅವರಿಗೆ ಸಿಗಲಿಲ್ಲ. ಕೊನೆಗೆ ದೂರದಿಂದ ನೋಡಿದ ತೃಪ್ತಿಯಿಂದ ಪ್ರಕಾಶ್ ಮನೆಗೆ ಮರಳಿದ್ದರು. ಪುನೀತ್ ರಾಜಕುಮಾರ್ ಜೊತೆ ನಟಿಸಬೇಕು ಎನ್ನುವ ಆಸೆ ಜೀವಂತವಾಗಿತ್ತು. ಆದರೆ, ಡಾ. ಪುನೀತ್ ರಾಜಕುಮಾರ್ ಅಕಾಲಿಕ ನಿಧನವು ಪ್ರಕಾಶ್ ಅವರ ಕನಸನ್ನು ನುಚ್ಚನೂರಾಗಿಸಿತು. ಪುನೀತ್‌ ಅವರ ಆದರ್ಶಗಳನ್ನು ಬಹುವಾಗಿ ಮೆಚ್ಚಿಕೊಂಡಿರುವ ಪ್ರಕಾಶ, ಇದೇ ಕಾರಣಕ್ಕೆ ಪುನೀತ್ ರಾಜಕುಮಾರ್ ನೆನಪಿಗಾಗಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು. ಪ್ರಕಾಶ ಅವರ ಇಡಿ ಕುಟುಂಬ ಪುನೀತ್‌ ಅಭಿಮಾನಿಗಳಾಗಿದ್ದು, ತಮ್ಮ ಮನೆಯ ಆವರಣದಲ್ಲಿ ಸುಮಾರು ₹8 ಲಕ್ಷ ಖರ್ಚು ಮಾಡಿ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಅಗಡಿಯ ಕಲಾವಿದರೊಬ್ಬರು ಡಾ. ಪುನೀತ್ ರಾಜಕುಮಾರ್‌ ಅವರ ಪುತ್ಥಳಿ ನಿರ್ಮಿಸುತ್ತಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ಸೆ. 26ರಂದು ಉದ್ಘಾಟನೆ:

ಪುನೀತ್‌ ದೇವಸ್ಥಾನ ಹಾಗೂ ಪುತ್ಥಳಿ ಉದ್ಘಾಟನೆಯನ್ನು ಅವರ ಪತ್ನಿ ಅಶ್ವಿನಿ ಅವರ ಕೈಯಿಂದಲೇ ಮಾಡಿಸಬೇಕು ಎಂಬುದು ಪ್ರಕಾಶ ಅವರ ಬಯಕೆ. ಅಲ್ಲದೇ ಪುನೀತ್‌ ದೇವಸ್ಥಾನ ನಿರ್ಮಿಸುತ್ತಿರುವ ಉದ್ದೇಶವನ್ನೂ ಅವರಿಗೆ ವಿವರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ನಾಲ್ಕು ಸಲ ಅಶ್ವಿನಿ ಅವರನ್ನು ಭೇಟಿಯಾಗಿ ದೇವಸ್ಥಾನ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಸೆ. 26ರಂದು ದೇವಸ್ಥಾನ ಉದ್ಘಾಟನೆಗೆ ಬರುವುದಾಗಿಯೂ ಅಶ್ವಿನಿ ಒಪ್ಪಿಕೊಂಡಿದ್ದಾರಂತೆ.

ಚಪ್ಪಲಿ ಧರಿಸದೇ ಹರಕೆ:ಪ್ರಕಾಶ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಪುನೀತ್‌ ದೇವಸ್ಥಾನ ಕಟ್ಟಿಸಲು ಆರಂಭಿಸಿದರು. ದೇವಸ್ಥಾನ ಪೂರ್ಣಗೊಳ್ಳುವ ವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ತಮ್ಮೊಳಗೇ ಪ್ರತಿಜ್ಞೆ ಮಾಡಿಕೊಂಡರು. ಅದರಂತೆ ಪ್ರಕಾಶ ಕಳೆದ 6 ತಿಂಗಳಿಂದ ಚಪ್ಪಲಿ ಧರಿಸದೇ ದೇವಸ್ಥಾನ ಕಟ್ಟಿಸಲು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಂಜಯಗಾಂಧಿ ಸಂಜೀವಣ್ಣನವರ ಕೂಡ ಇವರಿಗೆ ಸಾಥ್‌ ನೀಡುತ್ತಿದ್ದಾರೆ. ಪ್ರಕಾಶ ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಅಕ್ಕಪಕ್ಕದ ಬಸ್‌ ತಂಗುದಾಣಗಳಿಗೆ ತಮ್ಮದೇ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿದು ಯುವಕರಿಗೆ ಮಾದರಿಯಾಗಿದ್ದಾರೆ. ಪುನೀತ್‌ ಅವರ ಆದರ್ಶದಂತೆ ತಾನು ಬದುಕಬೇಕು ಎಂಬ ಆಶಯ ಹೊಂದಿದ್ದಾರೆ ಪ್ರಕಾಶ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ