ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುಟ್ಟಣ್ಣ ಗೋಕಾಕ್, ಪುನೀತ್ ಅವರು ಮಾಡಿದ ದಾನ, ಧರ್ಮ ಬೇರೆಯವರಿಗೆ ಮಾದರಿಯಾಗಿದ್ದು, ಕನ್ನಡ ನಾಡು, ನುಡಿಯ ಬಗ್ಗೆ ಹೆಚ್ಚು ಅಭಿಮಾನ ಇಟ್ಟುಕೊಂಡಿದ್ದ ಮಹಾನ್ ನಟ, ಅವರನ್ನು ಆರಾಧಿಸುತ್ತಿರುವ ಆಟೋ ಸಂಘದವರು ಆಡಂಬರದ ಆಚರಣೆ ಮಾಡದೆ ಅರ್ಥಪೂರ್ಣವಾಗಿ ರಕ್ತದಾನ, ನೇತ್ರದಾನ ಹಾಗೂ ಅನ್ನದಾನ ನಡೆಸಿ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಒಂದು ಸಾರ್ಥಕತೆ ತಂದುಕೊಟ್ಟಿದ್ದು ಭೂಮಿ ಇರುವವರೆಗೂ ಪುನೀತ್ ಹೆಸರು ಉಳಿಯಲಿದೆ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಸಿ. ಎನ್. ಶಶಿಧರ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಘಟಕದ ಚೇರ್ಮೆನ್ ಭರತ್ ಕುಮಾರ್ ಎಚ್. ಜಿ ಮಾತನಾಡಿ, ಡಾ. ಪುನೀತ್ ರಾಜಕುಮಾರ್ ಅವರು ಒಂದು ಅದ್ಭುತ ಶಕ್ತಿ. ಪುನೀತ್ ರಾಜಕುಮಾರ್ ಅವರ ನಡೆ-ನುಡಿ ದೇಶಕ್ಕೆ ಉತ್ತಮವಾದ ಸಂದೇಶವನ್ನು ಸಾರಿದೆ. ಡಾ. ಪುನೀತ್ ರಾಜ್‌ಕುಮಾರ್ ಅವರು ನಮ್ಮ ದೇಶದ ಆಸ್ತಿ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಅವರು ಎಷ್ಟೋ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿ ಕೊಟ್ಟಿರುವ ಮಹಾನ್ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಇವರ ಹುಟ್ಟುಹಬ್ಬದ ಪ್ರಯುಕ್ತ ಸುಮಾರು ೪೦ ವ್ಯಕ್ತಿಗಳು ತಮ್ಮ ನೇತ್ರದಾನ ಮಾಡಲು ನೋಂದಣಿಯನ್ನು ಮಾಡಿಸಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.ಮೇಗಲಕೇರಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ೧ರಿಂದ ೭ನೇ ತರಗತಿ ಮಕ್ಕಳಿಗೆ ಸಂಘದ ವತಿಯಿಂದ ಎಕ್ಸಾಂ ಪ್ಯಾಡ್ ಹಾಗೂ ಪೆನ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೇತ್ರ ತಜ್ಞರಾದ ಡಾ. ಸಿಂಧು, ಡಾ.ಶೇಖರ್, ಸಮಾಜ ಸೇವಕರಾದ ಗಜಾನನ ಮನೋಹರ್, ಸಂಘದ ಮುಖಂಡರಾದ ಎ. ರುದ್ರೇಶ್, ತೀರ್ಥಾಚಾರಿ, ಅಜಯ್ ಯಾದವ್, ಶಂಕರ್ ಬಿ.ಪಿ., ಗಂಗಾಧರ, ಸಂತೋಷ್, ಶ್ರೀನಿವಾಸ್, ಕುಮಾರ ಎ. ಜಿ., ರವಿ, ಮಂಜು, ಪ್ರಸನ್ನ, ಕುಮಾರ್ ಮತ್ತಿತರಿದ್ದರು.