ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿ, ಹೋರಾಟ ಹಿಂಪಡೆಯುವಂತೆ ಮನವಿ

KannadaprabhaNewsNetwork |  
Published : Dec 03, 2025, 02:15 AM IST
2ಎಚ್‌ವಿಆರ್‌5 | Kannada Prabha

ಸಾರಾಂಶ

ಎಂಎಸ್‌ಪಿ ದರದಲ್ಲಿ ಖರೀದಿ ಕೇಂದ್ರದ ಮೂಲಕ ರಾಜ್ಯ ಸರ್ಕಾರ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರೈತರು ಬೆಳೆದ ಎಲ್ಲ ಮೆಕ್ಕೆಜೋಳವನ್ನು ಸರಕಾರ ಖರೀದಿಸಲು ಸಿದ್ಧವಿದೆ. ಆದ್ದರಿಂದ ರೈತರು ಡಿ. 8ರಿಂದ ಆರಂಭಿಸುವ ಹೋರಾಟವನ್ನು ಹಿಂಪಡೆಯಬೇಕೆಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ಹಾವೇರಿ: ಎಂಎಸ್‌ಪಿ ದರದಲ್ಲಿ ಖರೀದಿ ಕೇಂದ್ರದ ಮೂಲಕ ರಾಜ್ಯ ಸರ್ಕಾರ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರೈತರು ಬೆಳೆದ ಎಲ್ಲ ಮೆಕ್ಕೆಜೋಳವನ್ನು ಸರಕಾರ ಖರೀದಿಸಲು ಸಿದ್ಧವಿದೆ. ಆದ್ದರಿಂದ ರೈತರು ಡಿ. 8ರಿಂದ ಆರಂಭಿಸುವ ಹೋರಾಟವನ್ನು ಹಿಂಪಡೆಯಬೇಕೆಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ರೈತರಿಂದ 20 ಕ್ವಿಂಟಲ್‌ವರೆಗೆ ಮೆಕ್ಕೆಜೋಳ ಖರೀದಿಸುವಂತೆ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವಂತೆ ಪ್ರತಿ ಕ್ವಿಂಟಲ್‌ಗೆ 2400 ರು. ದರದಂತೆ ರಾಜ್ಯದಲ್ಲಿ 10 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಸಲಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಧಾರಣೆ ಹೆಚ್ಚಾಗುತ್ತದೆ. ರಾಜ್ಯದಲ್ಲಿ 50 ಲಕ್ಷ ಮೆಟ್ರಿಕ್ ಟನ್, ಹಾವೇರಿ ಜಿಲ್ಲೆಯ ರೈತರು ಬೆಳೆದ ಏಳುವರೆ ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಪ್ರಸ್ತಾವನೆ ಸಲ್ಲಿಸುತ್ತೇವೆ. ಸರ್ಕಾರ ರೈತರ ಪರವಾಗಿದೆ. ನಾವೂ ಕೂಡ ರೈತರ ಪರವಾಗಿ ಇದ್ದೇವೆ ಎಂದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ರೈತರ ಬಳಿ ಹೋಗಿ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ್ದೇವೆ. ಕೇಂದ್ರ ಸರಕಾರ 2,400 ರು.ನಿಗದಿ ಮಾಡಿ ಖರೀದಿ ಹೇಳಿದ್ದಾರೆ. ಅದರಂತೆ ಖರೀದಿ ಕೇಂದ್ರ ಆರಂಭಕ್ಕೆ ಸಿಎಂ ಆದೇಶ ಮಾಡಿದ್ದಾರೆ. ಆದರೆ ಹೆಚ್ಚು ಖರೀದಿಸುವ ಎಥೆನಾಲ್ ಫ್ಯಾಕ್ಟರಿಗಳು ಕೇಂದ್ರದ ಹಿಡಿತದಲ್ಲಿವೆ. ಅವರು ಎಷ್ಟು ಖರೀದಿ ಮಾಡಬೇಕು ಎಂಬುದನ್ನು ಸಂಸದರು ಕೇಂದ್ರಕ್ಕೆ ಒತ್ತಡ ಹೇರಬೇಕು. ರಾಜ್ಯದಲ್ಲಿ ಕೆಎಂಎಫ್, ಪೌಲ್ಟ್ರಿ ಫಾರಂಗಳಿಗೆ ಸರಬರಾಜು ಮಾಡುವುದನ್ನು ರಾಜ್ಯ ಸರ್ಕಾರ ಮಾಡುತ್ತದೆ. ಜತೆಗೆ ಗೋಣಿಚೀಲ, ಸಾಗಾಟ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು.ಶಾಸಕ ಬಸವರಾಜ ಶಿವಣ್ಣವರ ಮಾತನಾಡಿ, ಕೇಂದ್ರ ಸರ್ಕಾರ ಜೋಳ ಮತ್ತು ರಾಗಿಗೆ ಎಂಎಸ್‌ಪಿ ದರ ನಿಗದಿ ಮಾಡಿ ಖರೀದಿಸುವ ಮಾದರಿಯಲ್ಲಿ ಮೆಕ್ಕೆಜೋಳ ಖರೀದಿ ಮಾಡಬೇಕು. ಈ ಬಗ್ಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಗಮನಸೆಳೆಯಬೇಕು. ಸಂಸದರು ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತು ಕೆಲಸ ಮಾಡಬೇಕು. ರೈತರ ಹಿತದೃಷ್ಟಿಯಿಂದ ಮಹಾದಾಯಿ ಯೋಜನೆಗೆ ಮೊದಲು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿ ಯೋಜನೆ ಆರಂಭಿಸಲಿ, ಬೇಡ್ತಿ ವರದಾ ನದಿ ಜೋಡಣೆ ಡಿಪಿಆರ್ ಆಗುತ್ತಿದೆ ಎಂದು ಹೇಳುತ್ತಾರೆ, ತಮ್ಮದೇ ಪಕ್ಷದ ಸಂಸದರು ವಿರೋಧ ಮಾಡುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಅನುಷ್ಠಾನಕ್ಕೆ ತರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಬಾರದು. ಎಲ್ಲರೂ ರೈತರ ಹಿತಕ್ಕಾಗಿ ಕೆಲಸ ಮಾಡಬೇಕು ಎಂದರು.ಮನವೊಲಿಸುವ ಪ್ರಯತ್ನ: ಡಿ. 8ರಂದು ಮೋಟೆಬೆನ್ನೂರಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ರೈತ ಸಂಘದ ಮುಖಂಡರ ಜತೆಗೆ ಶೀಘ್ರದಲ್ಲೇ ಜಿಲ್ಲೆಯ ಎಲ್ಲ ಶಾಸಕರು ಸೇರಿ ಹಾಗೂ ವೈಯಕ್ತಿಕವಾಗಿ ಸಭೆ ಕರೆದು ಚರ್ಚಿಸುತ್ತೇವೆ. ಸಾಧ್ಯವಾದರೆ ಜಿಲ್ಲೆಯ ಎಲ್ಲಾ ಶಾಸಕರ ನೇತೃತ್ವದಲ್ಲಿಯೂ ಸಭೆ ಮಾಡಿ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಬಸವರಾಜ ಶಿವಣ್ಣನವರ ಹೇಳಿದರು.ಶಾಸಕರಾದ ಪ್ರಕಾಶ ಕೋಳಿವಾಡ, ಯಾಸೀರ್‌ಖಾನ್ ಪಠಾಣ್, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ ಮೈದೂರ, ಶಿವಕುಮಾರ ತಾವರಗಿ, ಹೊನ್ನಪ್ಪ ಚಾವಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ