ಬೆಂಬಲ ಬೆಲೆಯಡಿ ಉದ್ದು, ಹೆಸರು, ಸೂರ್ಯಕಾಂತಿ ಖರೀದಿ

KannadaprabhaNewsNetwork |  
Published : Sep 27, 2025, 12:00 AM IST
ಶಿವಾನಂದ ಪಾಟೀಲ್‌  | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಉದ್ದಿನ ಕಾಳು, ಹೆಸರು ಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾ ಕಾರ್ಯಪಡೆ ಸಮಿತಿಗಳಿಗೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಉದ್ದಿನ ಕಾಳು, ಹೆಸರು ಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾ ಕಾರ್ಯಪಡೆ ಸಮಿತಿಗಳಿಗೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಆದೇಶಿಸಿದ್ದಾರೆ.

ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಕಾಳು ಪ್ರತಿ ಕ್ವಿಂಟಲ್‌ಗೆ 8,768, ಉದ್ದಿನ ಕಾಳು 7,800 ರು. ಹಾಗೂ ಸೂರ್ಯಕಾಂತಿ 7,721 ರು. ನಿಗದಿ ಮಾಡಲಾಗಿದೆ. ಅದರಂತೆ ಜಿಲ್ಲಾ ಕಾರ್ಯಪಡೆ ಸಮಿತಿಗಳು ಖರೀದಿ ಏಜೆನ್ಸಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರ ರೈತರಿಂದ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಬೆಂಬಲ ಬೆಲೆ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವ ವರ್ತಕರಿಗೆ ಅವಕಾಶ ನೀಡಬಾರದು. ರೈತರ ಹೆಸರಲ್ಲಿ ಮಾರಾಟ ಮಾಡಲು ಬರುವ ವರ್ತಕರ ಬಗ್ಗೆ ಎಚ್ಚರವಹಿಸಬೇಕು ಹಾಗೂ ಅವರಿಂದ ಬೆಳೆ ಖರೀದಿ ಮಾಡಬಾರದು ಎಂದು ನಿರ್ದೇಶಿಸಿದ್ದಾರೆ.

ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್‌, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಸರುಕಾಳು, ಕಲಬುರಗಿ, ಬೀದರ್‌, ಯಾದಗಿರಿ, ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉದ್ದಿನಕಾಳು ಹಾಗೂ ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸೂರ್ಯಕಾಂತಿ ಖರೀದಿ ಮಾಡಲಾಗುವುದು ಎಂದು ಶಿವಾನಂದ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳಗಳನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ.

ನೋಂದಣಿ ಕಾಲಾವಧಿಯನ್ನು 80 ದಿನ ಹಾಗೂ ಖರೀದಿ ಅವಧಿಯನ್ನು 90 ದಿನ ಎಂದು ನಿಗದಿ ಮಾಡಲಾಗಿದೆ. ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಆರಂಭಿಸಬೇಕು. ಖರೀದಿ ಸಂಸ್ಥೆಗಳು ನಾಫೆಡ್‌ ಹಾಗೂ ಎನ್‌ಸಿಸಿಎಫ್‌ ಮಾರ್ಗಸೂಚಿ ಅನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿ, ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾ ಕಾರ್ಯಪಡೆ ಸಮಿತಿಗೆ ನಿರ್ದೇಶನ ನೀಡಿದ್ದಾರೆ.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ