ದೇವರ ನಾಮಸ್ಮರಣೆಯಿಂದ ಚಿತ್ತ ಶುದ್ಧಿ: ಲಿಂಗರಾಜ ಮಹಾರಾಜ

KannadaprabhaNewsNetwork | Published : Apr 5, 2025 12:47 AM

ಸಾರಾಂಶ

ಮಾನವನು ಹೊರಗಿನ ವಿಷಯಗಳನ್ನು ದೂರವಿಟ್ಟು, ತನು, ಮನ ಹಾಗೂ ಬುದ್ಧಿಯನ್ನು ಕೇಂದ್ರಿಕರಿಸಿ ಧ್ಯಾನ ಮಾಡಬೇಕು. ಅಂತ್ಯಕಾಲದಲ್ಲಿ ದೇವರ ನಾಮಸ್ಮರಣೆ ಮಾಡುವ ಮೂಲಕ ಮುಕ್ತಿ ಪಡೆಯಬೇಕು.

ರಾಣಿಬೆನ್ನೂರು: ದೇವರ ನಾಮಸ್ಮರಣೆಯಿಂದ ಚಿತ್ತ ಶುದ್ಧಿಯಾಗುವ ಜತೆಗೆ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಯಲ್ಲಟ್ಟಿಯ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಆಶ್ರಮದ ಲಿಂಗರಾಜ ಮಹಾರಾಜರು ನುಡಿದರು.ಇಲ್ಲಿಯ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಕಾರ್ಯಕ್ರಮ ಹಾಗೂ ದೇವರ ದಾಸಿಮಯ್ಯನವರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವನು ಹೊರಗಿನ ವಿಷಯಗಳನ್ನು ದೂರವಿಟ್ಟು, ತನು, ಮನ ಹಾಗೂ ಬುದ್ಧಿಯನ್ನು ಕೇಂದ್ರಿಕರಿಸಿ ಧ್ಯಾನ ಮಾಡಬೇಕು. ಅಂತ್ಯಕಾಲದಲ್ಲಿ ದೇವರ ನಾಮಸ್ಮರಣೆ ಮಾಡುವ ಮೂಲಕ ಮುಕ್ತಿ ಪಡೆಯಬೇಕು ಎಂದರು.ಇದಕ್ಕೂ ಮುನ್ನ ಬೆಳಗ್ಗೆ ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯರಿಂದ ಬಸವಣ್ಣನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಬನ್ನಿಗಿಡದ ದೀಕ್ಷಾಪೂಜೆ ನಡೆಯಿತು.ಯಲ್ಲಟ್ಟಿಯ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಆಶ್ರಮದ ಭಾಗ್ಯೋದಯ ಮಹಾರಾಜರು, ಚೈತನ್ಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ಕುದರಿಗಲ್ಲಿಯ ಶ್ರೀ ಬನಶಂಕರಿದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಶೋಕ ದುರ್ಗದಶೀಮಿ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ಬೆಟಗೇರಿ, ಮರಿಸ್ವಾಮಿ ಪೂಜಾರ, ನಾಗಪ್ಪ ಹರಿಹರ, ಚಂದ್ರಪ್ಪ ಉದಗಟ್ಟಿ, ಸತೀಶ ಬೆಳ್ಳೂಡಿ, ರವಿ ಕೆರೂಡಿ, ಸುಮಾರ ಹಳ್ಳಿ, ಜಯಶ್ರೀ ಕುಂಚೂರ, ಉಮಾ ಅಗಡಿ, ಗಣೇಶ ಸಾಲಗೇರಿ, ಭೋಜರಾಜ ಗುಲಗಂಜಿ, ಸರೋಜಾ ಕೊಪ್ಪದ, ನಾಗರತ್ನಾ ದಿಗಿದಿಗಿ, ಅನುರಾಧಾ ಗುಳೇದಗುಡ್ಡ ಮತ್ತಿತರರಿದ್ದರು.ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಕ್ಕೆ ಮನವಿ

ಬ್ಯಾಡಗಿ: ಬೇಸಿಗೆ ಸಮಯದಲ್ಲಿ ಜೀವನ ನಿರ್ವಹಣೆ ಮಾಡಲು ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ದೂರದ ಊರುಗಳಿಗೆ ತೆರಳದೆ, ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ.ಎಂ. ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏ. 1ರಿಂದ ನರೇಗಾ ಕೂಲಿ ದರವನ್ನು ಹೆಚ್ಚಳ ಮಾಡಲಾಗಿದೆ. ಇದೀಗ ದಿನಕ್ಕೆ ₹370 ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಅರ್ಹ ಕೂಲಿ ಕಾರ್ಮಿಕರು ನರೇಗಾ ಸೌಲಭ್ಯ ಪಡೆಯುಂತೆ ಕೋರಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಹಳ್ಳ, ಕೆರೆ, ನಾಲಾ, ಚೆಕ್ ಡ್ಯಾಂಗಳ ಹೂಳೆತ್ತುವ ಮೂಲಕ ನೈಸರ್ಗಿಕ ಜಲ ಸಂಪತ್ತು ರಕ್ಷಿಸಿ ಬಲಪಡಿಸಲು ಹಾಗೂ ಕಾರ್ಮಿಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹೆಚ್ಚು ಕೂಲಿ ಕೆಲಸ ಆಧರಿತ ಕಾಮಗಾರಿ ಆಯ್ದುಕೊಂಡು ಕೆಲಸ ಕೊಡಲಾಗುತ್ತದೆ. ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿಗೆ ತೆರಳಿ ನಮೂನೆ 6 ಕೂಲಿ ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕೆಂದರು.ನರೇಗಾ ಯೋಜನೆಯಡಿ ಗ್ರಾಮೀಣ ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೊಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ ₹37000 ಪಡೆದುಕೊಳ್ಳಬಹುದು. ಪುರುಷ ಮತ್ತು ಮಹಿಳೆಗೆ ದಿನಕ್ಕೆ ₹370 ಸಮಾನ ಕೂಲಿ ಪಾವತಿಸಲಾಗುತ್ತದೆ. ಕೆಲಸ ಮಾಡಿದ ಕೂಲಿಕಾರರ ಕೂಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದರು.

Share this article