ಕನ್ನಡಪ್ರಭ ವಾರ್ತೆ ರಾಯಚೂರು
ದಿನೇ ದಿನೆ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿರುವುದರಿಂದ ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಿದ್ದು, ಅಂತರ ಜಿಲ್ಲೆ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮಹಾರಾಷ್ಟ್ರ ಪ್ರಾಂತದಲ್ಲಿ ಭಾರಿ ಮಳೆಯಿಂದಾಗಿ ಆಲಮಟ್ಟಿ, ಬಸವಸಾಗರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ಕೃಷ್ಣಾ ನದಿಯಿಂದ 2.50 ಲಕ್ಷರಿಂದ 3 ಲಕ್ಷ ಕ್ಯುಸೆಕ್ ನೀರನ್ನು ಹೊರಗಡೆ ಬಿಡುತ್ತಿದ್ದು ಇದರಿಂದಾಗಿ ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಿ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇನ್ನು ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮೇಲೆ ನೀರು ಬಂದ ಕಾರಣಕ್ಕೆ ಗುರುವಾರದಿಂದಲೆಯೇ ಸಂಚಾರವನ್ನು ನಿಲ್ಲಿಸಲಾಗಿದೆ. ಹೀಗಾಗಿ ಪಕ್ಕದ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ನೇರ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗವಾದ ತಿಂಥಣಿ ಮುಖಾಂತರ ವಾಹನಗಳ ಸಂಚಾರ ನಡೆಯುತ್ತಿದೆ.ಲಕ್ಷಾಂತರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕುಗಳ ಅಚ್ಚುಕಟ್ಟು ಪ್ರದೇಶದ ಹಳ್ಳಿಗಳಲ್ಲಿ ನೆರೆ ಭೀತಿ ಎದುರಾಗಿರುವುದರಿಂದ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಈಗಾಗಲೇ ನೆರೆ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್ ತಂಡವು ಆಗಮಿಸಿದೆ.
ಪ್ರವಾಹದಿಂದಾಗಿ ದೇವದುರ್ಗ ತಾಲೂಕಿನ ಐತಿಹಾಸಿಕ ಕೊಪ್ಪರ ಲಕ್ಷ್ಮೀನರಸಿಂಹ ದೇವಸ್ಥಾನ, ಗೂಗಲ್ ಅಲ್ಲಮಪ್ರಭು ಮಂದಿರ, ಜಾಲಹಳ್ಳಿ ಹತ್ತಿರದ ಲಿಂಗದಳ್ಳಿಯ ರಾಮದಾಸದ ಬೃಂದಾವನ, ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನಗಳು ಜಲಾವೃತಗೊಮಂಡಿವೆ.
ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷ