ಲಗಾನ್ ಟೀಂಗೆ ಬ್ರೇಕ್ ಹಾಕಿ, ಜಿಲ್ಲಾಧ್ಯಕ್ಷರ ಬದಲಾಯಿಸಿ!

KannadaprabhaNewsNetwork |  
Published : Sep 20, 2025, 01:00 AM IST
19ಕೆಡಿವಿಜಿ1, 2-ಬೆಂಗಳೂರಿನ ರಮಡಾ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ಡಾ.ರಾಧಾ ಮೋಹನದಾಸ್ ಅಗರವಾಲ್‌ ಹಾಗೂ ಕೋರ್ ಕಮಿಟಿ ಮುಂದೆ ತಮ್ಮ ದೂರು, ಅಹವಾಲು ಸಲ್ಲಿಸಿದ ನಂತರ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ತಂಡದೊಂದಿಗೆ ಪಕ್ಷದ ರಾಜ್ಯ, ಜಿಲ್ಲಾ ನಾಯಕರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಲಗಾನ್ ಟೀಂಗೆ ಅಮಾನತುಪಡಿಸಬೇಕು, ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ, ವಿಧಾನಸಭೆ ಚುನಾವಣೆಗೆ ಈಗಲೇ ಪರಸ್ಪರ ಪಕ್ಷದ ಟಿಕೆಟ್‌ ಘೋಷಣೆ ಮಾಡಿಕೊಳ್ಳುತ್ತಿರುವವರಿಗೆ ಬ್ರೇಕ್ ಹಾಕುವಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ ನೇತೃತ್ವದ ತಂಡ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್‌ ಅಗರವಾಲ್ ಹಾಗೂ ಕೋರ್ ಕಮಿಟಿ ಮುಂದೆ ಪಟ್ಟುಹಿಡಿದಿದೆ.

- ಬೆಂಗಳೂರಿನ ರಮಡಾ ರೆಸಾರ್ಟ್‌ನಲ್ಲಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್, ಕೋರ್ ಕಮಿಟಿಗೆ ಅಹವಾಲು

- - -

- ವಿಧಾನಸಭೆಗೆ ಈಗಲೇ ಸ್ವಯಂ ಟಿಕೆಟ್ ಘೋಷಣೆ; ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ ತಂಡ ಆರೋಪ

- ಆಡಿಯೋ, ವೀಡಿಯೋ, ದಾಖಲೆ ಸಮೇತ ರೇಣು ಟೀಂ ವಿರುದ್ಧ ಆರೋಪ ಪುಷ್ಟೀಕರಿಸ್ತೇವೆ

- ದಾವಣಗೆರೆ ಬೆಳವಣಿಗೆ ಅಮಿತ್ ಶಾ- ನಡ್ಡಾ ಗಮನಕ್ಕೆ ತರುತ್ತೇವೆ: ಡಾ.ಅಗರವಾಲ್ ಭರವಸೆ

- ಲೋಕಸಭೆ ಚುನಾವಣೆಯಿಂದ ಮೊನ್ನೆ ನ್ಯಾಮತಿ ಟಿಎಪಿಸಿಎಂಎಸ್‌ ಚುನಾವಣೆ ಬಗ್ಗೆ ದೂರು

- ಮಾಜಿ ಸಚಿವರಾದ ರೇಣುಕಾಚಾರ್ಯ- ರವೀಂದ್ರನಾಥ ನಡವಳಿಕೆಯಿಂದ ಬಿಜೆಪಿಗೆ ಸೋಲು

- - -

(ಕನ್ನಡಪ್ರಭ ವಿಶೇಷ)

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಲಗಾನ್ ಟೀಂಗೆ ಅಮಾನತುಪಡಿಸಬೇಕು, ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ, ವಿಧಾನಸಭೆ ಚುನಾವಣೆಗೆ ಈಗಲೇ ಪರಸ್ಪರ ಪಕ್ಷದ ಟಿಕೆಟ್‌ ಘೋಷಣೆ ಮಾಡಿಕೊಳ್ಳುತ್ತಿರುವವರಿಗೆ ಬ್ರೇಕ್ ಹಾಕುವಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ ನೇತೃತ್ವದ ತಂಡ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್‌ ಅಗರವಾಲ್ ಹಾಗೂ ಕೋರ್ ಕಮಿಟಿ ಮುಂದೆ ಪಟ್ಟುಹಿಡಿದಿದೆ.

ಬೆಂಗಳೂರಿನ ರಮಡಾ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ಡಾ.ರಾಧಾ ಮೋಹನದಾಸ್ ಅಗರವಾಲ್‌ ಹಾಗೂ ಕೋರ್ ಕಮಿಟಿ ಮುಂದೆ ಬಿಜೆಪಿಯ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ, ಡಾ. ಎ.ಎಚ್. ಶಿವಯೋಗಿ ಸ್ವಾಮಿ ಸೇರಿದಂತೆ ಲಗಾನ್ ಟೀಂ ಚಟುವಟಿಕೆ, ಪಕ್ಷವಿರೋಧಿ ಕಾರ್ಯಗಳ ಬಗ್ಗೆ ದಾಖಲೆ, ಸಾಕ್ಷ್ಯಾಧಾರ, ಆಡಿಯೋ, ವೀಡಿಯೋಗಳ ಸಮೇತ ತಮ್ಮ ಆರೋಪವನ್ನು ಪುಷ್ಟೀಕರಿಸುತ್ತೇವೆ ಎಂಬುದಾಗಿ ಸಿದ್ದೇಶ್ವರ-ಹರೀಶ ನೇತೃತ್ವದ ತಂಡ ವಿವರಿಸಿದೆ.

ಸುಮಾರು 01.20 ಗಂಟೆಗೂ ಹೆಚ್ಚು ಹೊತ್ತು ದಾವಣಗೆರೆ ಜಿಲ್ಲೆಯ ಬಿಜೆಪಿಯ ಸ್ಥಿತಿಗತಿ ಬಗ್ಗೆ, ಆಗುಹೋಗು, ಬೆಳವಣಿಗೆಗಳು, ಲಗಾನ್ ಟೀಂ ನಡೆಗಳು, ನಡವಳಿಕೆಗಳ ಬಗ್ಗೆ, ಲೋಕಸಭೆ ಚುನಾವಣೆ ಆರಂಭದಿಂದ ಸೆ.13ರಂದು ನ್ಯಾಮತಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆವರೆಗೆ ರೇಣುಕಾಚಾರ್ಯ ಮತ್ತು ತಂಡ ಹೇಗೆಲ್ಲಾ ಬಿಜೆಪಿಗೆ ಮಾರಕವಾಗಿ ನಡೆ ಅನುಸರಿಸುತ್ತಿದೆ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಹೇಗೆಲ್ಲಾ ಕಾರಣರಾಗಿದ್ದಾರೆ ಎಂಬ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದು, ಡಾ.ಅಗರವಾಲ್‌, ಕೋರ್ ಕಮಿಟಿ ಸದಸ್ಯರು ತನ್ಮಯತೆಯಿಂದ ಎಲ್ಲವನ್ನೂ ಆಲಿಸಿದರು.

ನ್ಯಾಮತಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ರೇಣುಕಾಚಾರ್ಯ ಹೇಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಶ್ವನಾಥ ಪರ ಕೆಲಸ ಮಾಡಿದರೆಂಬ ಬಗ್ಗೆ ಹೊನ್ನಾಳಿ ಮುಖಂಡರಾದ ಎ.ಬಿ.ಹನುಮಂತಪ್ಪ, ಶಾಂತರಾಜ ಪಾಟೀಲ ಇತರರು ರಾಜ್ಯ, ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗ ಈಗ ಏನೂ ಮಾಡದವರಂತೆ ವರ್ತಿಸುತ್ತಿರುವವರ ಬಗ್ಗೆ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕಾದ ಜಿಲ್ಲಾಧ್ಯಕ್ಷರು ಇಂತಹ ಲಗಾನ್ ಟೀಂಗೆ ಸಹಕಾರ ನೀಡುತ್ತಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆಯೂ ಆಗಬೇಕು, ಪಕ್ಷವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಅಮಾನತುಪಡಿಸಬೇಕು ಎಂಬ ಒಕ್ಕೊರಲ ಒತ್ತಾಯವೂ ವ್ಯಕ್ತವಾಯಿತು.

ರೇಣುಕಾಚಾರ್ಯ ನೇತೃತ್ವದ ಲಗಾನ್ ಟೀಂ ಬಗ್ಗೆ ನಾವು ಸುಮ್ಮನೇ ಆರೋಪ ಮಾಡುತ್ತಿಲ್ಲ. ನಮ್ಮ ಆರೋಪಗಳಿಗೆ ದಾಖಲೆ, ಸಾಕ್ಷ್ಯಾಧಾರ ನೀಡುತ್ತೇವೆ. ಲೋಕಸಭೆ ಚುನಾವಣೆ ಮುನ್ನಾ ದಿನ ಕಾಂಗ್ರೆಸ್ ಅಭ್ಯರ್ಥಿ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾಗಿ ಮಾಧ್ಯಮಗಳಲ್ಲಿ ಬರುತ್ತದೆ. ಅದೇ ದಿನವೇ ರವೀಂದ್ರನಾಥ ಯಾವುದೇ ಪ್ರತಿಕ್ರಿಯೆ ನೀಡದೇ, ಪಕ್ಷದ ಹಿನ್ನಡೆಗೆ ಕಾರಣವಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತು.

ರಾತ್ರೋರಾತ್ರಿ ಕಾಂಗ್ರೆಸ್‌ ಜೊತೆಗೆ ಸಂಪರ್ಕ ಬೆಳೆಸಿದ ನಮ್ಮದೇ ಪಕ್ಷದ ಕೆಲವರಿಂದಾಗಿ ನಾವು ಲೋಕಸಭಾ ಕ್ಷೇತ್ರ ಕಳೆದುಕೊಳ್ಳಬೇಕಾಯಿತು. ಲಗಾನ್ ಟೀಂ ಪಟ್ಟುಹಿಡಿದು ಒಳಗಿಂದೊಳಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿಕೊಂಡು ಬಂದಿತ್ತು. ಆದರೆ, ಪ್ರತಿಭಟನೆಗೆ ಹೊರತುಪಡಿಸಿದರೆ ಬೇರಾವುದಕ್ಕೂ ನಮ್ಮನ್ನು ಜಿಲ್ಲಾಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ, ಜಿಲ್ಲಾಧ್ಯಕ್ಷರ ಬದಲಾವಣೆಯೂ ಆಗಬೇಕು. ಜನ್ಮದಿನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವೇದಿಕೆಗಳಲ್ಲಿ ರೇಣುಕಾಚಾರ್ಯ ಸೇರಿದಂತೆ ಲಗಾನ್ ಟೀಂನವರು ಆ ಕ್ಷೇತ್ರಕ್ಕೆ ನೀನು, ಈ ಕ್ಷೇತ್ರಕ್ಕೆ ನಾನು ಎಂಬುದಾಗಿ ಸ್ವಯಂ ಅಭ್ಯರ್ಥಿಗಳ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ. ಅಜಯಕುಮಾರ, ಚಂದ್ರಶೇಖರ ಪೂಜಾರ ಸೇರಿದಂತೆ ಲಗಾನ್ ಟೀಂ ವಿರುದ್ಧ ಕ್ರಮ ಆಗಬೇಕು. ಸ್ವಯಂ ಘೋಷಿತ ನಾಯಕರು ವೇದಿಕೆಗಳಲ್ಲಿ ತಮ್ಮ ತಂಡದ ಸದಸ್ಯರ ಕೈಎತ್ತಿ, ಶಾಸಕರಾಗಿ ಮಾಡುವಂತೆ ಕೈ ಎತ್ತಿಸಿ, ಭಾಷಣ ಮಾಡುತ್ತಾರೆ. ನಾವು ಯಾವುದನ್ನೂ ಬಾಯಿ ಮಾತಿಗೆ ಆಡುತ್ತಿಲ್ಲ. ಆಡಿಯೋ, ವೀಡಿಯೋ, ಸಂಭಾಷಣೆ ಹೀಗೆ ಸಾಕ್ಷ್ಯಾದಾರಗಳ ಸಮೇತ ಇನ್ನು 8-10 ದಿನಗಳಲ್ಲಿ ಮತ್ತೊಂದು ನಿಯೋಗ ಬರಲಿದ್ದೇವೆ. ಅನಂತರ ರಾಷ್ಟ್ರೀಯ ನಾಯಕರ ಭೇಟಿಗೆ ದೆಹಲಿಗೂ ತೆರಳಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಕಮಿಟಿ ಸದಸ್ಯರಾದ ಡಾ.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ, ಅರವಿಂದ ಬೆಲ್ಲದ್, ಡಾ.ಸುಧಾಕರ ಸಹ ಇದ್ದರು.

ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ತುಮ್ಕೋಸ್ ಅಧ್ಯಕ್ಷ ಶಿವಕುಮಾರ, ದೂಡಾ ಮಾಜಿ ಅಧ್ಯಕ್ಷ, ವಕೀಲ ಎ.ವೈ.ಪ್ರಕಾಶ, ಬೇತೂರು ಸಂಗನಗೌಡ, ಹರಿಹರ ಲಿಂಗರಾಜ, ದೇವೇಂದ್ರಪ್ಪ, ಬಾತಿ ದೊಗ್ಗಳ್ಳಿ ವೀರೇಶ, ಎ.ಬಿ. ಹನುಮಂತಪ್ಪ, ಶಾಂತರಾಜ ಪಾಟೀಲ, ಕೆ.ವಿ. ಚನ್ನಪ್ಪ, ಜಗದೀಶ ಯಕ್ಕನಹಳ್ಳಿ, ನೆಲಹೊನ್ನೆ ದೇವರಾಜ, ಎಸ್.ಟಿ. ಯೋಗೇಶ್ವರ, ಜಯಪ್ರಕಾಶ ಸೇರಿದಂತೆ 30ಕ್ಕೂ ಹೆಚ್ಚು ಮುಖಂಡರು ಇದ್ದರು.

- - -

(ಬಾಕ್ಸ್) * ದಾವಣಗೆರೆ ಸೋಲಿನ ದೂರು, ಅಹವಾಲು ವರಿಷ್ಠರ ಗಮನಕ್ಕೆ ತರುವೆ: ಡಾ.ರಾಧಾಮೋಹನದಾಸ್ಮುಖಂಡರ ಅಹವಾಲು ಆಲಿಸಿದ ಡಾ.ರಾಧಾಮೋಹನದಾಸ್ ಅಗರವಾಲ್‌ ಮಾತನಾಡಿ, ನಿಮ್ಮ ದೂರು, ಅಹವಾಲು, ದಾವಣಗೆರೆ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪೂರ್ವ, ನಂತರದಿಂದ ಆದ ಬೆಳವಣಿಗೆಗಳು, ಘಟನೆಗಳ ಬಗ್ಗೆ ಎಲ್ಲ ವಿಚಾರವನ್ನೂ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗಮನಕ್ಕೆ ತರುತ್ತೇನೆ. ನಾವೂ ಸಹ ನಿಮ್ಮ ಜಿಲ್ಲೆಯ ಬೆಳವಣಿಗೆ, ಘಟನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಕೋರ್ ಕಮಿಟಿ ಸದಸ್ಯರಾದ ಮಾಜಿ ಸಿಎಂ ಸದಾನಂದ ಗೌಡ, ವಿಪಕ್ಷ ನಾಯಕ ಆರ್.ಅಶೋಕ್‌ ನಿಮ್ಮಗಳ ಬೇಡಿಕೆ, ಒತ್ತಾಯ ಸರಿಯಾಗಿವೆ. ನಾವೂ ಎಲ್ಲವನ್ನೂ ಗಮನಿಸುತ್ತೇವೆ. ಕೋರ್ ಕಮಿಟಿಯಲ್ಲೂ ದಾವಣಗೆರೆ ಜಿಲ್ಲೆಯ ಬೆಳವಣಿಗೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತೇವೆ ಎಂದು ಸಿದ್ದೇಶ್ವರ, ಹರೀಶ ನೇತೃತ್ವದ ತಂಡಕ್ಕೆ ಭರವಸೆ ನೀಡಿದರು.

- - -

-19ಕೆಡಿವಿಜಿ1, 2:

ಬೆಂಗಳೂರಿನ ರಮಡಾ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ಡಾ.ರಾಧಾ ಮೋಹನದಾಸ್ ಅಗರವಾಲ್‌ ಹಾಗೂ ಕೋರ್ ಕಮಿಟಿ ಮುಂದೆ ತಮ್ಮ ದೂರು, ಅಹವಾಲು ಸಲ್ಲಿಸಿದ ನಂತರ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ತಂಡದೊಂದಿಗೆ ಪಕ್ಷದ ರಾಜ್ಯ, ಜಿಲ್ಲಾ ನಾಯಕರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ