ಕುದೂರು: ಯಾವುದೇ ದಾಖಲಾತಿಗಳಿಲ್ಲದೆ, ಕಾನೂನಿನ ಭಯವಿಲ್ಲದೆ, ಜನರ ಪ್ರಾಣದ ಜೊತೆಗೆ ಆಟವಾಡುವಂತಹ ಆಪೆ ಆಟೋಗಳ ಸಂಖ್ಯೆ ಕುದೂರು ಹೋಬಳಿಯಲ್ಲಿ ಮಾರಿಗೊಂದರಂತೆ ಓಡಾಡುತ್ತಿವೆ.
ರಾಷ್ಟ್ರೀಯ ಹೆದ್ದಾರಿ-75 ಸೋಲೂರು ಗ್ರಾಮದಿಂದ ಕುದೂರು ಗ್ರಾಮಕ್ಕೆ ಬರಲು ಸಂಜೆಯಾಯಿತೆಂದರೆ ಬಸ್ಸುಗಳ ಕೊರತೆಯಿದೆ. ಇರುವ ಒಂದೆರೆಡು ಬಸ್ಸುಗಳು ಬರುವುದು ಹತ್ತು ನಿಮಿಷ ತಡವಾದರೆ ಬಸ್ಸಿಗಾಗಿ ಕಾಯುತ್ತಾ ನಿಂತ ಜನರ ಬಳಿಗೆ ಹೋಗಿ ಇಂದು ಬಸ್ಸು ಬರುವುದಿಲ್ಲ ಆಟೋ ಹೊರಟಿದೆ ಎಂದು ಹೇಳಿ ಹತ್ತಿಸಿಕೊಂಡು ಆಟೋ ಭರ್ತಿ ಮಾಡಿಕೊಂಡು ಹೊರಡುತ್ತಾರೆ. ಇದೆಲ್ಲಾ ಆಟೋದವರ ಗಿಮಿಕ್ ಎಂದು ಜನರಿಗೆ ಅರ್ಥವಾಗದೆ ಉಸಿರಾಡಲು ಕಷ್ಟವಾಗುವಂತಹ ಆಟೋದಲ್ಲಿ ಅವರು ಕೇಳಿದಷ್ಟು ಹಣ ತೆತ್ತು ಪ್ರಯಾಣಿಸುತ್ತಾರೆ.
ಆಶ್ಚರ್‍ಯವೆಂದರೆ ಹೀಗೆ ಆಟೋ ತುಂಬಾ ಜನರನ್ನು ತುಂಬಿಸಿಕೊಳ್ಳುವುದು ಸೋಲೂರು ಗ್ರಾಮದ ಪೊಲೀಸ್ ಠಾಣೆಯ ಎದುರಿನಲ್ಲೆ. ಇದನ್ನು ಕಣ್ಣಾರೆ ಕಂಡರು ಪೊಲೀಸರಿಗೆ ಜಾಣ ಕುರುಡು. ಇದರ ನಡುವೆ ರಸ್ತೆಗಳು ಹದಗೆಟ್ಟಿವೆ. ಮಳೆಗಾಲ ಬಂತೆಂದರೆ ರಸ್ತೆಗಳು ಸಣ್ಣ ಸಣ್ಣ ಕರೆಗಳಂತಾಗುತ್ತವೆ. ಸೇತುವೆ ನಿರ್ಮಾಣ ಮಾಡಲು ಮಾದಿಗೊಂಡನಹಳ್ಳಿ ಪಂಚಾಯ್ತಿ ಅರ್ಧ ರಸ್ತೆಗೆ ಪೈಪುಗಳನ್ನು ಹಾಕಿದ್ದಾರೆ. ಬೀದಿದೀಪಗಳನ್ನು ಅಳವಡಿಸಿಲ್ಲ. ಅತಿವೇಗಕ್ಕೆ ಕಡಿವಾಣ ಹಾಕುವವರಿಲ್ಲ. ಸೋಲೂರು ರಸ್ತೆಯಲ್ಲಿ ಆಗಾಗ್ಗೆ ಇಂತಹ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಪೊಲೀಸರು ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣು ತೆರೆಯಬೇಕಾದರೆ ಇನ್ನೆಷ್ಟು ಹೆಣಗಳು ಉರುಳಬೇಕಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಇದೇ ಹೆದ್ದಾರಿಯಿಂದ ಮುಂದೆ 8 ಕಿಮೀ ಮುಂದೆ ಇರುವ ಮರೂರು ಹ್ಯಾಂಡ್‌ಪೋಸ್ಟ್‌ನಿಂದ ಕುದೂರು ಗ್ರಾಮಕ್ಕೆ ಬರುವ ಆಟೋಗಳ ಸ್ಥಿತಿಗತಿಗಳು ಹೀಗೆಯೆ ಆಗಿವೆ. ಪೊಲೀಸರು ಹೆದ್ದಾರಿಯಲ್ಲಿ ನಿಂತುಕೊಂಡು ವಾಹನಗಳನ್ನು ತಡೆಹಿಡಿದು ದಾಖಲೆ ಪರಿಶೀಲನೆ, ಹೆಚ್ಚು ಜನರನ್ನು ತುಂಬಿಕೊಂಡಿದ್ದೀರಿ ಎಂದೆಲ್ಲಾ ಕಾರಣ ನೀಡಿ ದಂಡ ವಸೂಲಿ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅವರ ಪಕ್ಕದಲ್ಲಿಯೇ ಆಟೋಗಳಲ್ಲಿ 15 ಜನರನ್ನು ತುಂಬುದುವುದು ಮಾತ್ರ ಕಾಣದಂತೆ ವರ್ತಿಸುತ್ತಾರೆ. ಹೀಗೆ ಜನರನ್ನು ತುಂಬಿಕೊಂಡು ಬರುವ ವಾಹನ ಕುದೂರು ಪೋಲೀಸ್ ಠಾಣೆಯ ಮುಂದೆ ಭಯವಿಲ್ಲದೆ ಸಂಚರಿಸುತ್ತವೆ.
ಇದು ಕುದೂರು, ಸೋಲೂರು, ಮರೂರು ಗ್ರಾಮದ ಕಥೆ ಮಾತ್ರವಲ್ಲ. ಸಾಲುಗಟ್ಡಿ ನಿಂತ ಗ್ರಾಮಗಳ ಬಹುತೇಕ ಆಟೋಗಳಿಗೆ ದಾಖಲೆಗಳೆ ಇಲ್ಲ. ಆರ್‌ಟಿಒ, ಸ್ಥಳೀಯ ಪೋಲೀಸ್, ಹಾಗೂ ಅಧಿಕಾರಿಗಳು ಒಮ್ಮತದ ಶಾಮೀಲಾಗಿದ್ದರೆ ಮಾತ್ರ ಇಂತಹ ಆಟೋಗಳು ರಸ್ತೆ ಮೇಲೆ ಸಂಚರಿಸಲು ಸಾಧ್ಯ ಎಂಬುದು ಜನರ ಆರೋಪವಾಗಿದೆ,ಪೊಲೀಸರು ಅಟೋದವರ ಮೇಲೆ ಕ್ರಮ ಕೈಗೊಳ್ಳುವಾಗ ಸ್ಥಳೀಯ ರಾಜಕೀಯ ಪುಡಾರಿಗಳು ಒತ್ತಡ ತಂದು ಜಾತಿ ಧರ್ಮದ ಲೇಪನ ಹಚ್ಚಿಸಿ ಕ್ರಮ ಕೈಗೊಳ್ಳದಂತೆ ಮಾಡುತ್ತಾರೆ. ಇನ್ನು ಮುಂದೆ ಹೀಗಾದರೆ ಜನರು ಒಟ್ಟಾಗಿ ಯಾರೇ ಆದರೂ ಸರಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಾಕ್ಸ್...................ಆಪೆ ಆಟೋಗಳ ಡಿಕ್ಕಿ: ದಂಪತಿ ಸೇರಿ ಮೂವರ ದುರ್ಮರಣ
ಕನ್ನಡಪ್ರಭ ವಾರ್ತೆ ಕುದೂರುಕುದೂರು ಹೋಬಳಿ ಕೆಂಚನಪುರ ಗ್ರಾಮದ ಬಳಿ ಎರಡು ಆಪೆ ಆಟೋಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಕುದೂರು ಗ್ರಾಮದ ರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಗುರುರಾಜ್ ತಂದೆ ತಾಯಿಗಳಾದ ಜಯಪ್ರಕಾಶ್ (63), ಉಷಾ(57) ಅಪಘಾತದಲ್ಲಿ ಮೃತಪಟ್ಟವರು. ಮತ್ತೋರ್ವ ವೃದ್ಧೆಯ ಮಾಹಿತಿ ತಿಳಿದು ಬಂದಿಲ್ಲ.ದಂಪತಿ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಇಡೀ ಪಟ್ಟಣದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಮರ್ಪಿಸಿದರು. ಸೋಲೂರು ಗ್ರಾಮದಿಂದ ಕುದೂರು ಗ್ರಾಮಕ್ಕೆ ಒಂದೊಂದು ಆಟೋದಲ್ಲಿ ಹದಿನಾಲ್ಕು ಹದಿನೈದು ಜನರನ್ನು ತುಂಬಿಕೊಂಡು ಬರುತ್ತವೆ. ಹಾಗೆ ಬರುವಾಗ ಕುದೂರು ಮಾರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಮತ್ತೊಂದು ಖಾಸಗಿ ಆಟೋ ಎರಡು ವೇಗದಲ್ಲಿ ಇದ್ದ ಕಾರಣ ಮುಖಾಮುಖಿ ಡಿಕ್ಕಿಯಾಗಿವೆ.
ಖಾಸಗಿ ಆಟೋದ ಚಾಲಕನಿಗೆ ಬಲವಾಗಿ ಪೆಟ್ಟು ಬಿದ್ದಿದ್ದು ಮತ್ತೊಂದು ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಮಗ್‌ಶಾಟ್ ಫೋಟೋ ಮಾತ್ರ ಹಾಕಿ)
3ಕೆಆರ್ ಎಂಎನ್ 2,3.ಜೆಪಿಜಿ2.ಅಟೋ ಅಪಘಾತದಲ್ಲಿ ಮೃತರಾದ ಕುದೂರು ಗ್ರಾಮದ ದಂಪತಿಗಳು ಉಷಾ ಮತ್ತು ಜಯಪ್ರಕಾಶ್.
3.ಉರುಳಿಬಿದ್ದಿರುವ ಆಟೋ.