ಕನ್ನಡಪ್ರಭ ವಾರ್ತೆ ಕೋಲಾರ
ಹಿರಿಯ ಅಧಿಕಾರಿಗಳ ವಾಸಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ತಾಲೂಕು ಕಚೇರಿಯಲ್ಲಿ ರೈತರ ಶೋಷಣೆ ಮಾಡುವ ದಲ್ಲಾಳಿಗಳ ಹಾವಳಿಗೆ ಕಡಿವಾಣವಿಲ್ಲದಂತಾಗಿದೆ. ಭೂಪರಿವರ್ತನೆಗೆ ೩ ಲಕ್ಷ, ಪಿ.ನಂಬರ್ ದುರಸ್ತಿ ಮಾಡಲು ೪ ಲಕ್ಷ ನಿಗದಿ ಮಾಡಲು ಅಧಿಕಾರಿಗಳು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಿಂದ ತಾಲೂಕು ಕಚೇರಿಗೆ ಬರುವ ರೈತರೆ ಶೌಚಾಲಯಕ್ಕೆ ಹೋಗಲು ಜೊತೆಯಲ್ಲಿ ಚಂಬುಗಳಲ್ಲಿ ನೀರು ತನ್ನಿ ಎಂದು ನಾಮಫಲಕ ಅಳವಡಿಸಿ ಎಂದು ತಹಸೀಲ್ದಾರ್‌ರಿಗೆ ಸಲಹೆ ನೀಡಿದರು.ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದಾಗ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ, ಚರಂಡಿಗಳ ಅಭಿವೃದ್ಧಿಯಿಲ್ಲದೆ ಒತ್ತುವರಿ ಆಗಿರುವುದರಿಂದ ಮಳೆ ನೀರು ಲಕ್ಷಾಂತರ ರು. ಬಂಡವಾಳ ಹಾಕಿ ಬೆಳೆದಿರುವ ರೈತರ ಕೃಷಿ ಜಮೀನಿಗೆ ನುಗ್ಗಿ ಬೆಳೆ ನಾಶವಾದರೆ ಮತ್ತೊಂದು ಕಡೆ ಬಡವರ ಮನೆಗೆ ನೀರು ನುಗ್ಗಿ ಬಡವರ ಬದುಕನ್ನೇ ಬೀದಿಗೆ ತಳ್ಳುತ್ತಿದ್ದರೂ ಸಮಸ್ಯೆ ಕಂದಾಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಒತ್ತುವರಿದಾರರ ಪರ ನಿಂತು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಗೆ ಬರುವ ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕರಿಗೆ ಕನಿಷ್ಠ ಪಕ್ಷ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯಿಲ್ಲ. ಇರುವ ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿವೆ. ದೂರದ ಊರುಗಳಿಂದ ಬರುವ ಬಡವರು ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಸಮಸ್ಯೆಯನ್ನು ಕೇಳಲು ಹಿರಿಯ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಇದ್ದರೂ ರಿಯಲ್ ಎಸ್ಟೇಟ್ ಉದ್ಯಮಿಗಳು ಗಂಟೆಗಟ್ಟಲೇ ಕಚೇರಿಯಲ್ಲಿ ಕುಳಿತು ಕಷ್ಟಸುಖಗಳನ್ನು ಮಾತನಾಡಿಕೊಳ್ಳುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮಣ್ಣ ತೆನ್ನಹಳ್ಳಿ, ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ಪುತ್ತೇರಿ ರಾಜು, ನಾಗರಾಜ್, ಗೀರೀಶ್, ರಾಜೇಶ ಪಾರುಕ್‌ಪಾಷ ಇದ್ದರು.