ಹೊಸಪೇಟೆ: ಜಿಲ್ಲೆಯಲ್ಲಿ ಹಾಲು ಕಡಿಮೆ ಮಾರಾಟವಾಗುತ್ತಿದ್ದು, ಮದ್ಯ ಜಾಸ್ತಿ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಜೂಜಾಟ, ಗಾಂಜಾ, ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲ ತಕ್ಷಣ ಕಡಿವಾಣ ಹಾಕಿ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ದೊರೆಯುತ್ತಿದೆ. ಬರೀ 32 ಸಾವಿರ ಲೀ. ಅಕ್ರಮ ಮದ್ಯ ಮಾತ್ರ ಅಬಕಾರಿ ಇಲಾಖೆಯವರು ಒಂದು ವರ್ಷದಲ್ಲಿ ವಶಪಡಿಸಿಕೊಂಡಿದ್ದಾರೆ. ಪೊಲೀಸ್, ಅಬಕಾರಿ, ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಅಕ್ರಮ ಮರಳು ದಂಧೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಖಡಕ್ಕಾಗಿ ಎಚ್ಚರಿಸಿದರು.
ನಮಗೆ ಹರಾಮಿ ದುಡ್ಡು ಬೇಕಾಗಿಲ್ಲ: ಶಾಸಕ ನೇಮರಾಜ್ ನಾಯ್ಕ ಮಾತನಾಡಿ, ಜಿಲ್ಲೆಯ ಶಾಸಕರು, ಸಂಸದರು, ಸಚಿವರಿಗೆ ಅಕ್ರಮ ದುಡ್ಡು ಬೇಕಾಗಿಲ್ಲ. ಅಕ್ರಮ ದಂಧೆಗೆ ಕಡಿವಾಣ ಹಾಕಿ, ಅಕ್ರಮದ ವಿಷಯದಲ್ಲಿ ಪೊಲೀಸರಿಗೆ ಏಕೆ ಇಷ್ಟೊಂದು ಆಸಕ್ತಿ? ಮೊದಲು ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಕ್ರಿಕೆಟ್ ಜೂಜಾಟ, ಮಕ್ರಮ ಮದ್ಯ, ಮರಳು ದಂಧೆಗೆ ಕಡಿವಾಣ ಹಾಕಿ. ಇಂತಹ ದಂಧೆಗೆ ಬಡವರೇ ಬಲಿಪಶು ಆಗುತ್ತಿದ್ದಾರೆ. ನಮಗೆ ಬಡವರ ದುಡ್ಡು ಬೇಕಾಗಿಲ್ಲ. ಐಪಿಎಲ್ ಬೆಟ್ಟಿಂಗ್‌ನಿಂದ ಎಷ್ಟು ಜನ ಸತ್ತಿದ್ದಾರೆ ಗೊತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಸಂಸದ ತುಕಾರಾಂ, ಶಾಸಕರಾದ ಕೃಷ್ಣ ನಾಯ್ಕ, ಡಾ. ಎನ್.ಟಿ. ಶ್ರೀನಿವಾಸ್, ಶಾಸಕಿ ಎಂ.ಪಿ. ಲತಾ ಕೂಡ ಧ್ವನಿಗೂಡಿಸಿ ಮೊದಲು ಜಿಲ್ಲೆಯಲ್ಲಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ ಎಂದು ಆಗ್ರಹಿಸಿದರು.
ನಾನೇ ಖುದ್ದು ದಾಳಿ ಮಾಡುವೆ: ಸಚಿವ ಜಮೀರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಪೊಲೀಸರು ಯಾವುದೇ ಕೆಲಸ ಮಾಡದಿದ್ದರೆ, ನಾನೇ ಖುದ್ದು ದಾಳಿ ಮಾಡುವೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಸೇರಿದಂತೆ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಎಸ್‌ಪಿಯವರು ಟೀಂ ರಚನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಶುದ್ಧ ಕುಡಿಯುವ ನೀರು ಸಿಗಲಿ: ಜಿಲ್ಲೆಯ ಹಳ್ಳಿ, ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯಬೇಕು. 699 ಶುದ್ಧ ಕುಡಿಯುವ ನೀರು ಘಟಕಗಳಲ್ಲಿ 67 ಘಟಕಗಳಲ್ಲಿ ಸಮಸ್ಯೆ ಇದೆ ಎಂದು ಸಭೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಶಾಸಕ ನೇಮರಾಜ್ ನಾಯ್ಕ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ದೀಪಾ ಅವರನ್ನು ಪ್ರಶ್ನಿಸಿದರು.
₹40 ಕೋಟಿ ಕೂಲಿ ಹಣ ಬಾಕಿ!: ಮನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದವರಿಗೆ ₹40 ಕೋಟಿ ಕೂಲಿ ಹಣ ಬಾಕಿ ಇದೆ ಎಂದು ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಸಭೆಗೆ ತಿಳಿಸುತ್ತಿದ್ದಂತೆಯೇ ಶಾಸಕರಾದ ನೇಮರಾಜ್ ನಾಯ್ಕ ಮತ್ತು ಕೃಷ್ಣ ನಾಯ್ಕ ಅವರು ಮೊದಲು ಜನರಿಗೆ ಕೂಲಿ ಹಣ ಪಾವತಿ ಮಾಡಿ ಎಂದು ತಾಕೀತು ಮಾಡಿದರು.
ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾ ನೋಡಲ್ ಅಧಿಕಾರಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಶಾ, ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಕುರಿ ಶಿವಮೂರ್ತಿ ಮತ್ತಿತರರಿದ್ದರು.