ಕನ್ನಡಪ್ರಭ ವಾರ್ತೆ ಪಾಂಡವಪುರ
ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಮಹಿಳೆಯರ ರಕ್ಷಣೆ ಮಾಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮೇಲ್ವಿಚಾರಕಿ ಲಕ್ಷ್ಮೀ ದೇಶಪಾಂಡೆ ಹೇಳಿದರು.ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವಿದ್ಯಾ ಪ್ರಚಾರ ಸಂಘ, ವಿಜಯ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ ಐಕ್ಯೂಎಸಿ ಮತ್ತು ಮಹಿಳಾ ಸಬಲೀಕರಣ ಹಾಗೂ ಮಹಿಳಾ ದೌರ್ಜನ್ಯ ತಡೆ ಸಮಿತಿ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಹೆಣ್ಣು ಭ್ರೂಣ ಹತ್ಯೆಗಳು ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಪುರುಷರಿಗಿಂತಲೂ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಮಾಜದ ಜವಾಬ್ದಾರಿ ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಹೆಣ್ಣು ಈ ಸಮಾಜದ ಕಣ್ಣು. ಮನೆ ಕೆಲಸದಿಂದ ವಿಮಾನ ಓಡಿಸುವವರೆಗೆ ಮಹಿಳೆ ಮುನ್ನಡೆದಿದ್ದಾಳೆ. ಮಹಿಳೆಯರು ತಮ್ಮ ಆರೋಗ್ಯ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಮುಂದೆ ಗರ್ಭಿಣಿಯಾದಾಗ ತೊಂದರೆ ಅನುಭವಿಸುವ ಕಾರಣ ಮಹಿಳೆಯರು ಹೆಚ್ಚು ಹೆಚ್ಚು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಂಗವಿಕಲತೆಯ ಅಪ್ಪ- ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ನನಗೆ ಚಿಕ್ಕ ವಯಸ್ಸಿನಲ್ಲೇ ಲಭಿಸಿತು. ವಿದ್ಯಾಭ್ಯಾಸದ ನಡುವೆಯೇ ಅವರನ್ನು ಜೋಪಾನ ಮಾಡುವ ಹೊಣೆ ನನ್ನದಾಗಿತ್ತು. ಚಿಕ್ಕ ಕೊಠಡಿಯಲ್ಲಿಯೇ ಊಟ, ನಿದ್ರೆ ಎಲ್ಲವೂ ನಡೆಯುತ್ತಿತ್ತು ಎಂದು ತಮ್ಮ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿ, ದೇಶದಲ್ಲಿ ಹಲವು ಮಹಿಳೆಯರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳು ಧೈರ್ಯ ಹಾಗೂ ಛಲದಿಂದ ಸಮಸ್ಯೆಗಳನ್ನು ಎದುರಿಸಬೇಕಿದೆ ಎಂದರು.
ಪ್ರಾಂಶುಪಾಲ ಪ್ರೊ.ಎಂ.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾ ಪ್ರಚಾರ ಸಂಘದ ಖಜಾಂಚಿ ಎನ್.ರಾಮೇಗೌಡ, ಆಂಗ್ಲ ಉಪನ್ಯಾಸಕ ಡಾ.ನಾಗೇಶ್, ಮಹಿಳಾ ಕೂಟದ ಸಂಚಾಲಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಕೆ. ಲೀಲಾ ಮಾತನಾಡಿದರು.ಈ ವೇಳೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಇದೇ ವೇಳೆ ಕಾಲೇಜಿನ ಕಾರಿಡಾರ್ ನಲ್ಲಿ ಮಹಿಳೆಯರ ಬದುಕು, ಜೀವನ ಕುರಿತಂತೆ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.