ಹಾವೇರಿ: ಹಾವೇರಿ ತಾಲೂಕು ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಂಘದ ಅಧ್ಯಕ್ಷ ಮಂಜುನಾಥ ಪುತಳೇಕರ ಹಾಗೂ ಸಂಗಡಿಗರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 166 ಜನರಿಗೆ ನಿವೇಶನ ನೋಂದಣಿ ಮಾಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಗರಸಭೆಗೆ ನಿವೇಶನ ಹಂಚಿಕೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದೆ ಎಂಬ ಪುತಳೇಕರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ವೆಂಕಟೇಶ ದೈವಜ್ಞ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಜಾರಿಲಕಮಾಪುರದಲ್ಲಿ ರಾಜ್ಯ ಸರ್ಕಾರದಿಂದ 128 ಸುವರ್ಣಕಾರರಿಗೆ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಾವೇರಿ ತಾಲೂಕು ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಂಘದಿಂದ ಖೊಟ್ಟಿ ದಾಖಲೆ ಸೃಷ್ಟಿಸಿ 166 ನಿವೇಶನಗಳನ್ನು ನೋಂದಾಯಿಸಲಾಗಿದ್ದು, ಈ ಕುರಿತು ನಡೆದಿರುವ ಕಾನೂನು ಹೋರಾಟ ಅಂತಿಮ ಹಂತಕ್ಕೆ ತಲುಪಿದೆ. ಇಜಾರಿಲಕಮಾಪುರದ ಸರ್ವೇ ನಂಬರ್ 29ರ 18 ಎಕರೆ ಜಾಗವನ್ನು 128 ಸದಸ್ಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ 1981ರಲ್ಲಿ ಪಟ್ಟಾ ನೀಡಲಾಗಿದೆ.
ಸೋಮಶೇಖರ ಕುರ್ಡೇಕರ, ನಂದಾ ರಿತ್ತಿ, ಸನತ ರಿತ್ತಿ, ಅಶ್ವಿನಿ ಕೂಸನೂರ, ಶಿವಬಸಪ್ಪ ಶೀಲವಂತರ, ಸದಾನಂದ ಪಾಲನಕರ, ಸಂಜೀವ ರಾಯ್ಕರ, ಸಂತೋಷ ರಿತ್ತಿ ಇತರರಿದ್ದರು.ಪ್ರಭಾವಿಗಳಿಂದ ಜಮೀನು ಪಟ್ಟಾ ರದ್ದು: ಮಹಿಳೆ ಆರೋಪ
ರಾಣಿಬೆನ್ನೂರು: ಸರ್ಕಾರದಿಂದ ನಮಗೆ ಮಂಜೂರಾಗಿದ್ದ ಜಮೀನನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅದರ ಪಟ್ಟಾ ರದ್ದಾಗುವಂತೆ ಮಾಡಿದ್ದಾರೆ ಎಂದು ತಾಲೂಕಿನ ಚಳಗೇರಿ ಗ್ರಾಮದ ಮಂಜಮ್ಮ ಹನುಮಂತ ಹೊನ್ನಕ್ಕಳವರ ಆರೋಪಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1987ರಲ್ಲಿ ಗ್ರಾಮದ ಸರ್ವೆ ನಂ. 43ಕ್ಕೆ ಸಂಬಂಧ ಪಟ್ಟ 17 ಎಕರೆ ವಿಸ್ತೀರ್ಣ ಜಮೀನಿನ ಪೈಕಿ 4.27 ಎಕರೆ ಜಮೀನನ್ನು ನನ್ನ ಪತಿಯ ತಂದೆ ಗುಡ್ಡಪ್ಪ ತಾಯಿ ಮರಗವ್ವ ಹೊನ್ನಕ್ಕಳವರ ಹೆಸರಿಗೆ (ಎಲ್‌ಜಿಎಲ್- ಲ್ಯಾಂಡ್ ಗ್ರ್ಯಾಂಟ್ ಲ್ಯಾಂಡ್) ಸರ್ಕಾರ ಮಂಜೂರು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಚಳಗೇರಿ ಗ್ರಾಮದ ಡ- ನಂ. 5155 ಸಹ ಮಂಜೂರಾಗಿತ್ತು ಎಂದು ವಿವರಿಸಿದರು.ನಮಗೆ ಇದನ್ನು ಬಿಟ್ಟರೇ ಬೇರೆ ಯಾವುದೇ ಜಮೀನು ಇಲ್ಲ. ನಮ್ಮ ಕುಟುಂಬ ಇದನ್ನೆ ನಂಬಿ ನಮ್ಮ ಕುಟುಂಬ ಜೀವನ ಸಾಗಿಸುತ್ತಿದೆ. ಈಗಾಗಲೇ ಜಮೀನನ್ನು ನಾವೇ ಉಳುಮೆ ಮಾಡುತ್ತಾ ಬಂದಿದ್ದೇವೆ. ಆದರೆ ಇದೀಗ ರಾಜಕೀಯ ಪ್ರಭಾವದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ದಾಖಲೆ ಸೃಷ್ಟಿ ಮಾಡಿ ನಿಜವಾದ ಫಲಾನುಭವಿಯಾದ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಲವತ್ತುಕೊಂಡರು.ನಮ್ಮ ಪಟ್ಟಾ ರದ್ದು ಮಾಡಲು ಮುಂದಾಗಿರುವುದರಿಂದ ಬಡ ಹಾಗೂ ಹಿಂದುಳಿದ ಕುಟುಂಬವರಾದ ನಮಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ವಿಷಯವಾಗಿ ಈಗಾಗಲೇ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಅಹವಾಲು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸೂಕ್ತ ನ್ಯಾಯ ದೊರಕದಿದ್ದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪಾರ್ವತೆಮ್ಮ ಹೊನ್ನಕ್ಕಳವರ, ಕಮಲಮ್ಮ ಹೊನ್ನಕ್ಕಳವರ, ಶಿವಪ್ಪ ಹೊನ್ನಕ್ಕಳವರ ಸುದ್ದಿಗೋಷ್ಠಿಯಲ್ಲಿದ್ದರು.