ಬೆಳೆಹಾನಿ ವರದಿ ನೀಡದಿದ್ದರೆ ಹೋರಾಟ: ರೈತ ಸಂಘದಿಂದ ಅಧಿಕಾರಿಗಳಿಗೆ ಎಚ್ಚರಿಕೆ

KannadaprabhaNewsNetwork |  
Published : Aug 22, 2025, 01:00 AM IST
ಫೋಟೋ : 21ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಈಗಾಗಲೇ 7 ಸಾವಿರಕ್ಕೂ ಅಧಿಕ ರೈತರ ಅರ್ಜಿಗಳು ಬೆಳೆಹಾನಿ ಆದ ಬಗ್ಗೆ ಕೃಷಿ ಇಲಾಖೆಗೆ ಸಲ್ಲಿಕೆಯಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕಾಗಿತ್ತು. ವಿಳಂಬದ ಕಾರಣ ತಿಳಿಯುತ್ತಿಲ್ಲ.

ಹಾನಗಲ್ಲ:ನಿರಂತರ ಮಳೆಯಿಂದಾಗಿ ಆಗಿರುವ ಬೆಳೆಹಾನಿ ಬಗೆಗೆ ನಿರ್ಲಕ್ಷ್ಯ ತೊರಿರುವ ತಹಸೀಲ್ದಾರರು ನಾಲ್ಕಾರು ದಿನಗಳಲ್ಲಿ ಹಾನಿ ವರದಿ ನೀಡದಿದ್ದರೆ ತಹಸೀಲ್ದಾರ್ ಕಚೇರಿಗೆ ಘೇರಾವ್‌ ಹಾಕಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಎಚ್ಚರಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 23 ಇಲಾಖೆಗಳಲ್ಲಿ ರೈತರ ಸಮಸ್ಯೆಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಕಿಂಚಿತ್ತು ಲಕ್ಷ್ಯ ವಹಿಸಿಸದ ತಹಸೀಲ್ದಾರರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಬ್ಯಾಡಗಿ, ಹಿರೇಕೇರೂರು ತಾಲೂಕುಗಳಲ್ಲಿ ಬೆಳೆಹಾನಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಆದರೆ ಹಾನಗಲ್ಲ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಸಿದರೂ ಬೆಳೆಹಾನಿ ಪರಿಶೀಲನೆ ನಡೆದಿಲ್ಲ. ಇನ್ನೂ ಪರಿಶೀಲನೆಯ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟಾದ ಮೇಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಯಾವಾಗ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ ಎಂದರು.

ಈಗಾಗಲೇ 7 ಸಾವಿರಕ್ಕೂ ಅಧಿಕ ರೈತರ ಅರ್ಜಿಗಳು ಬೆಳೆಹಾನಿ ಆದ ಬಗ್ಗೆ ಕೃಷಿ ಇಲಾಖೆಗೆ ಸಲ್ಲಿಕೆಯಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕಾಗಿತ್ತು. ವಿಳಂಬದ ಕಾರಣ ತಿಳಿಯುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡವೆಪ್ಪ ಆಲದಕಟ್ಟಿ, ತಾಲೂಕು ಘಟಕದ ಪದಾಧಿಕಾರಿಗಳಾದ ಮಹೇಶ ವಿರುಪಣ್ಣನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಮಲ್ಲೇಶಪ್ಪ ಪರಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಜೀವ ದಾನಪ್ಪನವರ, ವಾಸುದೇವ ಕಮಾಟಿ, ಎಂ.ಎಂ. ಬಡಗಿ, ಶ್ರೀಧರ ಮಲಗುಂದ, ಅಜ್ಜನಗೌಡ ಕರೆಗೌಡ್ರ, ಶಿವಕುಮಾರ ಹಣ್ಣಿ, ಧರಣೇಂದ್ರಪ್ಪ ಹಾವನೂರ ಮೊದಲಾದವರಿದ್ದರು.

ವಿಳಂಬವಾಗಿಲ್ಲ: ಬೆಳೆಹಾನಿ ಪರಿಶೀಲನೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ಒಂದು ದಿನದ ಹಿಂದೆಯಷ್ಟೇ ಕೃಷಿ ಇಲಾಖೆಯಿಂದ ರೈತರ ಅರ್ಜಿಗಳ ಮಾಹಿತಿ ನೀಡಿದ್ದಾರೆ. 7489 ಅರ್ಜಿಗಳು ಬೆಳೆಹಾನಿ ಪರಿಹಾರಕ್ಕಾಗಿ ಸಲ್ಲಿಕೆಯಾಗಿವೆ. ಜಂಟಿ ಸಭೆ ಕರೆದು ಬೆಳೆಹಾನಿ ಪರಿಶೀಲನೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ತಹಸೀಲ್ದಾರ್ ರೇಣುಕಮ್ಮ ಎಸ್. ತಿಳಿಸಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ