(ರಾಜ್ಯಕ್ಕೂ ಮುಖ್ಯ, ಪುತ್ತಿಲ) ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರ ಮೂರು ಶರತ್ತು

KannadaprabhaNewsNetwork |  
Published : Feb 06, 2024, 01:30 AM IST
ಫೋಟೋ: ೫ಪಿಟಿಆರ್-ಪುತ್ತಿಲ ೧ಪುತ್ತಿಲ ಪರಿವಾರ ಸಮಾಲೋಚನಾ ಸಭೆಯನ್ನು ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿದರು. ಫೋಟೋ: ೫ಪಿಟಿಆರ್ ಪುತ್ತಿಲ ೨ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು | Kannada Prabha

ಸಾರಾಂಶ

ಪುತ್ತೂರಿನಲ್ಲಿ ಸೋಮವಾರ ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ನಿರ್ಣಯಗಳನ್ನು ಓದಿದರು. ಪರಿವಾರ ಕ್ಷಮೆ ಯಾಚಿಸುವ ಪ್ರಶ್ನೆ ಇಲ್ಲ, ಅರುಣ್‌ ಕುಮಾರ್‌ ಅವರಿಗೆ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕು, ಇಲ್ಲವಾದರೆ ಮುಂಬರುವ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಜವಾಬ್ದಾರಿಯುತ ಸ್ಥಾನ ನೀಡಿದಲ್ಲಿ ಪುತ್ತಿಲ ಪರಿವಾರ ಮಾತೃ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಲಿದೆ. ಒಂದು ವೇಳೆ ಅಧ್ಯಕ್ಷ ಪದವಿ ನೀಡಲು ವಿಫಲವಾದರೆ ಈ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ರಾಜಕೀಯ ನಡೆಯಲಿದ್ದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ. ಪುತ್ತಿಲರಿಗೆ ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷತೆ ನೀಡದಿದ್ದಲ್ಲಿ ಮುಂದೆ ಜಿಲ್ಲೆಯಲ್ಲಿ ಮಹಾ ರಾಜಕೀಯ ವಿಪ್ಲವ ನಡೆಯಲಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪುತ್ತೂರಿನ ಕೊಟೇಚ ಹಾಲ್‌ನಲ್ಲಿ ನಡೆದ ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ನಮಗೆ ಮಾತೃ ಪಕ್ಷದ ಬಗ್ಗೆ, ಸಂಘದ ಬಗ್ಗೆ ಸಂಪೂರ್ಣ ಗೌರವವಿದೆ. ಕಳೆದ ಎರಡು ತಿಂಗಳಿಂದ ಸಂಧಾನದ ಮಾತುಕತೆ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬರುತಿತ್ತು. ಇವತ್ತು ನಾವೇ ಮಾಧ್ಯಮದ ಮುಂದೆ ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದ ಅವರು, ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕು. ಹಾಗಾದಲ್ಲಿ ಪುತ್ತಿಲ ಪರಿವಾರವನ್ನು ಮಾತೃ ಪಕ್ಷವಾದ ಬಿಜೆಪಿಯೊಂದಿಗೆ ವಿಲೀನ ಮಾಡುತ್ತೇವೆ. ಇಲ್ಲದಿದಲ್ಲಿ ಜಿಲ್ಲೆಯಲ್ಲಿ ಸುನಾಮಿ ಬರಲಿ, ಭೂಕಂಪವಾಗಲಿ ನಾವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ದ ಎಂದರು.

ಪರಿವಾರದ ತೀರ್ಮಾನಕ್ಕೆ ಬದ್ಧ: ಪಕ್ಷದಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು. ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನು ಕೈಗೊಂಡಿದೆ. ಪರಿವಾರ ಕೈಗೊಂಡ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ ಎಂದು ಅರುಣ್‌ಕುಮಾರ್‌ ಪುತ್ತಿಲ ಹೇಳಿದರು.

ನಾವೆಲ್ಲರೂ ಕೂಡಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು. ರಾಷ್ಟ್ರೀಯ ವಿಚಾರ ಧಾರೆಯ ಜೊತೆ ನಮ್ಮ ಬದುಕು ಸಾಗಿದೆ. ನಮ್ಮ ರಕ್ತವನ್ನು ಬೆವರು ಮಾಡಿ ಮಾತೃ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇವೆ. ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರ ಆಸೆಯಂತೆ ಹೆಜ್ಜೆ ಇಟ್ಟಿದ್ದೆವು. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ಮತ್ತು ಸಂಘದ ಹಿರಿಯರ ಯೋಚನೆಯಂತೆ ನಡೆಯಲಿದ್ದೇವೆ. ಮುಂದಿನ ನಡೆಗೆ ಕಾರ್ಯಕರ್ತರ ವಿರೋಧ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ ಎಂದು ಹೇಳಿದರು.

ಸಂಘಟನಾ ಸಂದೇಶ ನೀಡಿದ ಶ್ರೀಕೃಷ್ಣ ಉಪಾಧ್ಯಾಯ, ದೇಶ ಭಕ್ತ ಮೋದಿಯನ್ನು ಕಳೆದುಕೊಳ್ಳಲು ಪುತ್ತಿಲ ಪರಿವಾರ ಎಂದಿಗೂ ಬಯಸುವುದಿಲ್ಲ. ಪುತ್ತಿಲ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ರಾಜ್ಯ ನಾಯಕರು ಉತ್ಸಾಹ, ಕಾತರದಲ್ಲಿದ್ದರೂ ಪುತ್ತೂರಿನ ಬೆರಳೆಣಿಕೆಯ ಸ್ಥಾಪಿತ ಹಿತಾಸಕ್ತಿಗಳು ತಡೆಯಾಗುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಯಾವತ್ತೂ ಬೈದಿಲ್ಲ. ಆದರೆ ಅನ್ಯಾಯ ಆಗುವಾಗ ಇಂತಹ ಅನ್ಯಾಯದ ಪರಂಪರೆ ಪುತ್ತೂರಿನಲ್ಲಿ ಅಂತ್ಯವಾಗಬೇಕು ಎಂದು ನಾವು ಅವರ ಪರವಾಗಿ ಮಾತನಾಡಿದ್ದೇವೆ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಶ್ರೀನಿವಾಸ ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪುತ್ತಿಲ ಪರಿವಾರದ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾಪ್ರಸಾದ್, ವಕೀಲ ರಾಜೇಶ್ ಕೆ.ಆರ್. ಇದ್ದರು.

ಪುತ್ತಿಲ ಪರಿವಾರದ ರವಿಕುಮಾರ್ ಸ್ವಾಗತಿಸಿ, ನವೀನ್ ರೈ ಪಂಜಳ ನಿರ್ವಹಿಸಿದರು.ಮೂರು ನಿರ್ಣಯಗಳು ಅಂಗೀಕಾರ

ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ನಿರ್ಣಯಗಳನ್ನು ಓದಿದರು.

-ಮಾತೃ ಪಕ್ಷ ಬಿಜೆಪಿಯ ನಾಯಕರು, ಹಿರಿಯರು ಅಥವಾ ಸಂಘ ಪರಿವಾರದವರಿಗೆ ಅಗೌರವ ಉಂಟಾಗುವ ಯಾವುದೇ ಹೇಳಿಕೆ, ಮಾತುಗಳನ್ನು ಪುತ್ತಿಲ ಪರಿವಾರ ಅಥವಾ ಅರುಣ್ ಕುಮಾರ್ ಪುತ್ತಿಲ ಆಡದೇ ಇರುವುದರಿಂದ ಯಾರಲ್ಲಿಯೂ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ.

-ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಜವಾಬ್ದಾರಿಯುತ ವ್ಯಕ್ತಿ ಗೌರವಯುತವಾಗಿ ನೀಡಿದರೆ ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗುವುದು.

-ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ನೀಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದಿಂದ ಜಿಲ್ಲೆಯಾದ್ಯಂತ ಸ್ಪರ್ಧೆ ನಡೆಸಲಾಗುವುದು.ಮುಂದಿನ ನಡೆಗೆ ಕಾರ್ಯಕರ್ತರ ವಿರೋಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಅರುಣ್ ಕುಮಾರ್ ಪುತ್ತಿಲ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿರೋಧಿ ಸ್ಪರ್ಧಿಗಳಿಂದ ಕೋಟ್ಯಾಂತರ ಹಣ ಪಡೆದಿದ್ದಾರೆ ಎನ್ನುತ್ತಾರೆ. ಆದರೆ ಯಾವ ವ್ಯಕ್ತಿ, ಪಕ್ಷದಿಂದಲೂ ಒಂದು ಪೈಸೆ ಪಡೆದಿಲ್ಲ. ಈ ಕುರಿತು ಪುತ್ತೂರು ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಪ್ರಾರ್ಥನೆ ಮಾಡಲೂ ಸಿದ್ಧನಿದ್ದೇನೆ

-ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸಂಸ್ಥಾಪಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ