ಚಿತ್ರೀಕರಣ ಆರಂಭ । ಸಾಹಿತಿ, ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ವಿರಚಿತ ಕಾದಂಬರಿ । ಆಂಜನೇಯನಿಗೆ ಪೂಜೆಗೈದು ಮುಹೂರ್ತ
ಬೆಂಗಳೂರಿನ ಕಲಾಸಿಪಾಳ್ಯದ ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಚಲನಚಿತ್ರ ಸೋಮವಾರ ತಾಲೂಕಿನ ತಾಳೂರಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಚಿತ್ರೀಕರಣ ಪ್ರಾರಂಭಿಸಿದೆ.
ಚಿತ್ರಕ್ಕೆ ಕ್ಯಾಮೆರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಓರ್ವ ಬಡ ಹಾಗೂ ತಬ್ಬಲಿ ವಿದ್ಯಾರ್ಥಿನಿಯ ಸಾಧನೆ ಕುರಿತು ಚಲನಚಿತ್ರ ಮೂಡಿ ಬರುತ್ತಿದ್ದು ಪ್ರತಿ ವಿದ್ಯಾರ್ಥಿಗೆ ತನ್ನ ಭವಿಷ್ಯ ಕುರಿತು ಮಾರ್ಗದರ್ಶನ ನೀಡುವ ಚಿತ್ರವಾಗಿದೆ. ವಿಶೇಷವಾಗಿ ಕೊಟ್ರೇಶ್ ಎಸ್. ಉಪ್ಪಾರ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಾಳೂರು ಗ್ರಾಮದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಒಬ್ಬ ವಿದ್ಯಾರ್ಥಿನಿ ಕುರಿತು ಚಲನಚಿತ್ರ ಮೂಡಿ ಬರುತ್ತಿರುವುದು ಹರ್ಷದಾಯಕ ಎಂದು ಹೇಳಿದರು.ಮಹಾಲಕ್ಷ್ಮಿ ಥಿಯೇಟರ್ಸ್ ಮಾಲೀಕ ಹಾಗೂ ನಿರ್ಮಾಪಕ ಲಕ್ಷ್ಮಿಕುಮಾರ್ ಮಾತನಾಡಿ, ಮಕ್ಕಳಿಗೆ ಸಂಬಂಧಪಟ್ಟ ಕಾದಂಬರಿ ಇದಾಗಿದ್ದ ಕಾರಣ ಮಕ್ಕಳ ಸಿನಿಮಾ ಮಾಡಲು ಸೂಕ್ತ ಕಥಾವಸ್ತು ಎಂದು ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣ ಚಂದು, ಸಂಕಲನ ಸ್ಟಾನಿ, ಸಹನಿರ್ದೇಶನ ಶರತ್ ಬಾಬು, ಅನಿಲ್ ಕುಮಾರ್ ಮಾಡುತ್ತಿದ್ದು ಮೊದಲ ಬಾರಿಗೆ ಅರುಣ್ ಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ದೇವಸ್ಥಾನದ ಟ್ರಸ್ಟಿ, ಗೌರವಾಧ್ಯಕ್ಷ ಚಿಕ್ಕೇಗೌಡ, ಊರಿನ ಮುಖಂಡರಾದ ಮೋಹನ್ ಕುಮಾರ್, ಧರ್ಮ ಟಿ.ಇ., ಜಿ.ಕೆ.ವೆಂಕಟೇಶ್, ಲಾಯರ್ ಮಂಜುನಾಥ್, ಗ್ರಾ.ಸ. ಹರೀಶ, ಮೋಹನ, ದಿನೇಶ, ಪುನೀತ, ಲೋಹಿತ, ಮಹೇಶ, ಚೇತನ್, ಪ್ರದೀಪ, ಚಂದನ, ಯೋಗೇಶ್ ಟಿ.ಎಚ್, ಮಂಜಯ್ಯ, ಈರಯ್ಯ, ಕೋಡಿಗಯ್ಯ, ಭದ್ರಯ್ಯ, ದಾಸಯ್ಯ, ಕುಮಾರ್, ಕಲಾವಿದರಾದ ಎಚ್.ಎಸ್. ಪ್ರಭಾಕರ್, ಗ್ಯಾರಂಟಿ ರಾಮಣ್ಣ, ಪೂಜಾ ರಘುನಂದನ್, ಸಾಹಿತಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜು, ವಾಸು ಸಮುದ್ರವಳ್ಳಿ ಮೊದಲಾದವರು ಇದ್ದರು.