ಪುಟ್ಟರಾಜ ಕವಿ ಗವಾಯಿಗಳು ಅಂಧರ ಜೀವನಕ್ಕೆ ಬೆಳಕು ತಂದ ಅಪೂರ್ವ ಸಾಧಕರು: ಸುಶೀಲಾ ಶಿರೂರು

KannadaprabhaNewsNetwork |  
Published : Mar 18, 2026, 02:15 AM IST
ಡಾ. ಪಂಡಿತ ಪಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತಿ ಅಂಗವಾಗಿ ಬಳ್ಳಾರಿಯ ವಿರಾಟ್ ನಗರದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಚಿಂತಕಿ ಸುಶೀಲಾ ಶಿರೂರು ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತಮ್ಮ ವೈಯಕ್ತಿಕ ಜೀವನದಲ್ಲಿನ ಅಂಧಕಾರವನ್ನು ಗೆದ್ದು, ಅನೇಕ ಅಂಧರ ಜೀವನಕ್ಕೆ ಬೆಳಕು ತಂದ ಅಪೂರ್ವ ಸಾಧಕರು ಎಂದು ಚಿಂತಕಿ ಸುಶೀಲಾ ಶಿರೂರು ತಿಳಿಸಿದರು.

ಬಳ್ಳಾರಿ: ಅಂಧರ ಬದುಕಿಗೆ ದಾರಿ ದೀಪವಾಗಿ ಬೆಳಗಿದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತಮ್ಮ ವೈಯಕ್ತಿಕ ಜೀವನದಲ್ಲಿನ ಅಂಧಕಾರವನ್ನು ಗೆದ್ದು, ಅನೇಕ ಅಂಧರ ಜೀವನಕ್ಕೆ ಬೆಳಕು ತಂದ ಅಪೂರ್ವ ಸಾಧಕರು ಎಂದು ಚಿಂತಕಿ ಸುಶೀಲಾ ಶಿರೂರು ತಿಳಿಸಿದರು.

ಇಲ್ಲಿನ ವಿರಾಟ್ ನಗರದಲ್ಲಿ ಗುರುಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ನಿಂದ ಪದ್ಮಭೂಷಣ ಡಾ. ಪಂಡಿತ ಪಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತಿ ಅಂಗವಾಗಿ ಜರುಗಿದ ಗಾನ ತರಂಗ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಂಡಿತ ಪುಟ್ಟರಾಜ ಗವಾಯಿಗಳು ಬಾಲ್ಯದಲ್ಲೇ ದೃಷ್ಟಿಯನ್ನು ಕಳೆದುಕೊಂಡರೂ ಅದನ್ನು ತಮ್ಮ ದೌರ್ಬಲ್ಯವಾಗಿ ಪರಿಗಣಿಸಲಿಲ್ಲ. ಬದಲಾಗಿ ಸಂಗೀತವನ್ನು ತಮ್ಮ ಜೀವನದ ಮಾರ್ಗವನ್ನಾಗಿ ಮಾಡಿಕೊಂಡರು. ಅದರಲ್ಲಿ ಅಪಾರ ಪರಿಣತಿ ಗಳಿಸಿದರು. ಅವರ ಸಂಗೀತ ಪ್ರತಿಭೆ ದೇಶಾದ್ಯಂತ ಖ್ಯಾತಿ ಪಡೆದಿದ್ದು, ಅವರು ಕೇವಲ ಕಲಾವಿದರಷ್ಟೇ ಅಲ್ಲ, ಸಮಾಜ ಸೇವಕರಾಗಿಯೂ ಹೊರಹೊಮ್ಮಿದರು.ಪುಟ್ಟರಾಜ ಗವಾಯಿಗಳು ಸ್ಥಾಪಿಸಿದ “ಗದಗ ಅಂಧರ ಕಲ್ಯಾಣ ಸಂಸ್ಥೆ” ಅಂಧ ಮಕ್ಕಳಿಗೆ ಶಿಕ್ಷಣ, ವಸತಿ ಮತ್ತು ಸಂಗೀತ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿದೆ. ಅನೇಕ ಅಂಧ ವಿದ್ಯಾರ್ಥಿಗಳಿಗೆ ಅವರು ಗುರುವಾಗಿದ್ದು, ಜೀವನದಲ್ಲಿ ಸ್ವಾವಲಂಬಿಯಾಗಲು ದಾರಿ ತೋರಿದ್ದಾರೆ. ಅವರ ಆಶ್ರಮದಲ್ಲಿ ಬೆಳೆದ ಹಲವಾರು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಹೊಂದಿದ್ದಾರಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎನ್.ಡಿ. ಯಂಕಮ್ಮ ಮಾತನಾಡಿ, ಸಂಗೀತ ಸಾಹಿತ್ಯದಿಂದ ಮನಸ್ಸು ಜಾಗೃತವಾಗಿ ಚಿಂತೆ ದೂರವಾಗಿ ಚಿಂತನೆ ಹೆಚ್ಚಾಗುತ್ತದೆ. ಇದರಿಂದ ಮಾತೃ ಹೃದಯದ ವ್ಯಕ್ತಿತ್ವ ಅರಳಿ ಗುರುಶಿಷ್ಯರ ಸಂಬಂಧದ ಪರಂಪರೆ ಮುಂದುವರಿಯುತ್ತದೆ ಎಂದು ತಿಳಿಸಿದರು.

ಪಂಡಿತ ಪುಟ್ಟರಾಜ ಗವಾಯಿಗಳ ಜೀವನವು ನಮಗೆ ಸ್ಫೂರ್ತಿದಾಯಕವಾಗಿದೆ. ಶಾರೀರಿಕ ಅಡಚಣೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಅವರು ತಮ್ಮ ಬದುಕಿನಿಂದ ಸಾಬೀತುಪಡಿಸಿದ್ದಾರೆ. ಇತರರ ಸೇವೆ ಮಾಡುವುದು ಜೀವನದ ಉದ್ದೇಶವಾಗಿರಬೇಕು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದ್ದಾರೆ.

ಪಂಡಿತ ಪುಟ್ಟರಾಜ ಗವಾಯಿಗಳು ಅಂಧರ ಬದುಕಿಗೆ ನಿಜವಾದ ದಾರಿ ದೀಪವಾಗಿದ್ದು, ಅವರ ಸೇವೆ ಮತ್ತು ಸಾಧನೆಗಳು ಸದಾಕಾಲವೂ ಸ್ಮರಣೀಯವಾಗಿವೆ ಎಂದು ಹೇಳಿದರು.

ಗುರುಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್‌ನ ಮುಖ್ಯಸ್ಥ ಹಾಗೂ ಹಿರಿಯ ಕಲಾವಿದ ದೊಡ್ಡ ಬಸವ ಗವಾಯಿ ಡಿ. ಕಗ್ಗಲ್ ಅವರು ಪ್ರಾಸ್ತಾವಿಕ ಮಾತನಾಡಿದರು.

ಬಯಲಾಟ ನಿರ್ದೇಶಕ ಮುದ್ದಟನೂರು ಎಚ್‌. ತಿಪ್ಪೇಸ್ವಾಮಿ, ಎರ್ರಿಗೌಡ ಗೆಣಿಕೆಹಾಳು, ನಬೀಸಾಬ್ ಡಿ. ಕಗ್ಗಲ್, ಸರಸ್ವತಿ, ಕವಿತಾ ಡಿ. ಕಗ್ಗಲ್ ಭಾಗವಹಿಸಿದ್ದರು. ವೀರೇಶ ದಳವಾಯಿ ಮತ್ತು ಹುಸೇನಪ್ಪ ಅರಳಿಗನೂರು ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪುಟ್ಟರಾಜ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತಪಡಿಸಿದರು. ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು. ಪಂಚಾಕ್ಷರಿ ಹಾಗೂ ಚಾಂದ್ ಬಾಷಾ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಕ್ಕೆ ಹೆದರಿ ಗುತ್ತಲ ರೈತ ಆತ್ಮಹತ್ಯೆ
ರಂಜಾನ್, ಯುಗಾದಿ ಆಚರಣೆ ಸೌಹಾರ್ದತೆಯ ಸಂಕೇತ-ಬಿ.ಸಿ. ಪಾಟೀಲ್‌