ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮುಷ್ಕರಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಂಬಲ ಸೂಚಿಸಿದರು.ನಗರದ ಜಿಪಂ ಕಚೇರಿ ಬಳಿ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಸಿ.ಎಸ್. ಪುಟ್ಟರಾಜು ಮಾತನಾಡಿ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿ ವ್ಯವಸ್ಥೆ ಬಹುಮುಖ್ಯವಾಗಿದೆ. ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ನೌಕರರ ಕೆಲಸ ಅಗತ್ಯವಾಗಿದೆ. ಪ್ರತಿಯೊಂದು ಸರ್ಕಾರದ ಕೆಲಸಗಳು ಗ್ರಾಮ ಪಂಚಾಯ್ತಿಯಿಂದಲೇ ಆಗಬೇಕಿದೆ. ಆದರೆ ಇಂದು ಅವರು ಬೀದಿಯಲ್ಲಿ ಬಂದು ನಿಲ್ಲುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ನೌಕರರ ಪದಾಧಿಕಾರಿಗಳ ರಾಜ್ಯಮಟ್ಟದಲ್ಲಿ ಸಭೆ ಕರೆದು, ಸಾಧಕ, ಬಾಧಕಗಳ ಚರ್ಚೆ ಮೂಲಕ ಮಾತುಕತೆ ನಡೆಸಬೇಕು. ಅವರ ನ್ಯಾಯಯುತ ಬೇಡಿಕೆಗಳನ್ನು ಸಮಯ ನಿಗದಿಪಡಿಸಿ ಈಡೇರಿಸುವ ವಾಗ್ದಾನ ನೀಡಬೇಕು. ಬೇಡಿಕೆ ಈಡೇರಿಸಲು ತಕ್ಷಣ ಸಾಧ್ಯವಾಗದಿದ್ದರೆ ಗಡುವು ನಿಗದಿಪಡಿಸಿ, ತಮ್ಮ ಇತಿಮಿತಿಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸ್ಪಂದಿಸದಿದ್ದರೆ ರಾಜಕೀಯ ರೂಪ ಪಡೆಯಲಿದೆ. ಅದಕ್ಕೆ ಅವಕಾಶ ನೀಡದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಧಿಕಾರಿ, ನೌಕರರ ಬೇಡಿಕೆಗಳಿಗೆ ಹಾಗೂ ಹೋರಾಟಕ್ಕೆ ಸ್ಪಂದಿಸದಿದ್ದರೆ ನಿಮ್ಮ ಜೊತೆ ನಾವು ಇದ್ದೇವೆ. ಯಾವುದೇ ಆತಂಕ ಬೇಡ. ಹೆದ್ದಾರಿ ತಡೆಯುವ ಮಟ್ಟಕ್ಕೆ ಸರ್ಕಾರ ನಡೆದುಕೊಳ್ಳಬಾರದು. ದಸರಾ ಹಿನ್ನೆಲೆಯಲ್ಲಿ ಇಂದು- ನಾಳೆಯೊಳಗೆ ಸರ್ಕಾರ ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಹೋರಾಟವನ್ನು ಅಂತ್ಯಕ್ಕೆ ಕೊಂಡೊಯ್ಯಬೇಕು:ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಹೋರಾಟವನ್ನು ಅಂತ್ಯಕ್ಕೆ ಕೊಂಡೊಯ್ಯಬೇಕು. ಸಚಿವರು ಸೇರಿದಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ ಅವರು, ಗ್ರಾಪಂ ನೌಕರರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ನನ್ನನ್ನೂ ಸೇರಿದಂತೆ ಜನಪ್ರತಿನಿಧಿಗಳು ನಿಮ್ಮ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದು ವಾಸ್ತವವಾಗಿದೆ. ಆದ್ದರಿಂದ ನಿಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕು ಎಂದರು.
ನಿಮ್ಮ ಕೆಲಸದ ಮೇಲೆ ಸಾಕಷ್ಟು ಒತ್ತಡ ಇದೆ. ತಳಮಟ್ಟದ ಪ್ರತಿ ಸಾಮಾನ್ಯ ಜನರ ಯಾವುದೇ ಕೆಲಸಗಳು ನಿಮ್ಮ ಮೇಲೆಯೇ ಅವಲಂಬಿತವಾಗಿವೆ. ಆ ಕೆಲಸಗಳು ಸುಲಭವಾಗಿ ನಡೆಯಲು ನಿಮಗೆ ಸ್ವಾತಂತ್ರ್ಯ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದರು.ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಮುಖಂಡ ಬಿ.ಆರ್.ಸುರೇಶ್,ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್‌ಬಾಬು, ಗ್ರಾಪಂ ಸದಸ್ಯರ ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್, ಮಹೇಶ್, ಪ್ರದೀಪ್ ಸಿದ್ದೇಗೌಡ, ಸುವರ್ಣಾವತಿ ಸೇರಿ ನೂರಾರು ಅಧಿಕಾರಿಗಳು, ನೌಕರರು, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.