ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಅವಿರತ ಶ್ರಮ ಅಗತ್ಯ

KannadaprabhaNewsNetwork |  
Published : Oct 10, 2024, 02:28 AM IST
ಬಳ್ಳಾರಿಯ ಹೊಂಗಿರಣ ಸಭಾಂಗಣದಲ್ಲಿ ಜರುಗಿದ ಕೆಎಎಸ್ ಪರೀಕ್ಷೆಗೆ ಉಚಿತವಾಗಿ ತರಬೇತಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ 5 ತಿಂಗಳ ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಪ್ರಸ್ತುತ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಮಾನ್ಯವಾಗಿದೆ.

ಬಳ್ಳಾರಿ: ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಉನ್ನತ ಗುರಿ ಹೊಂದಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಲು ಅವಿರತವಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ಕೆಎಎಸ್ ಪರೀಕ್ಷೆಗೆ ಉಚಿತವಾಗಿ ತರಬೇತಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ 5 ತಿಂಗಳ ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿ ಉದ್ಘಾಟನಾ ಸಮಾರಂಭಂದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಯಶಸ್ಸಿಗೆ ದಿನಕ್ಕೆ 5ರಿಂದ 6 ಗಂಟೆಗಳ ಏಕಾಗ್ರ ಅಧ್ಯಯನ ಅಗತ್ಯವಾಗಿದ್ದು, ಅಧ್ಯಯನದ ಹೊರತಾಗಿ ಆಕಾಂಕ್ಷಿಗಳು ಸಹನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಶ್ರಮದಿಂದ ಹಿಂದೆ ಸರಿಯಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ವಿದ್ಯಾರ್ಥಿಗಳು ಹೊಸದನ್ನು ಕಲಿಯುವ ಕುತೂಹಲವನ್ನು ಬೆಳೆಸಿಕೊಳ್ಳಬೇಕು ಮತ್ತು ಆಲೋಚನೆಗಳು ಮತ್ತು ಮಾಹಿತಿಗೆ ತೆರೆದುಕೊಳ್ಳಬೇಕು ಎಂದು ಹೇಳಿದರು.

ಆಕಾಂಕ್ಷಿಗಳು ತಮ್ಮ ಪ್ರಚಲಿತ ವಿದ್ಯಮಾನಗಳ ಜ್ಞಾನವನ್ನು ಹೆಚ್ಚಿಸಲು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ಕಠಿಣ ಪರಿಶ್ರಮ ಅಥವಾ ವೈಫಲ್ಯದ ಭಯದಿಂದ ಹಿಂಜರಿಯಬಾರದು. ವೈಫಲ್ಯವು ಯಶಸ್ಸಿನ ಮೆಟ್ಟಿಲು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದರು.

ಬಳ್ಳಾರಿಯ ಗ್ರಾಮೀಣ ಮತ್ತು ನಗರ ಪ್ರದೇಶದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆವುಳ್ಳ ಯುವಕ-ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲಕ್ಕಾಗಿ ಡಿಎಂಎಫ್ ವತಿಯಿಂದ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು.

ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿಗೆ ಒಟ್ಟು 192 ವಿದ್ಯಾರ್ಥಿಗಳು/ಆಕಾಂಕ್ಷಿಗಳು ಆಯ್ಕೆಯಾಗಿದ್ದು, ಅವರಿಗೆ ಇಂದಿನಿಂದ 5 ತಿಂಗಳವರೆಗೂ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2.30 ರವರೆಗೆ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ತರಬೇತಿ ನೀಡಲಾಗುವುದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ಸೇರಿದಂತೆ ಆಕಾಂಕ್ಷಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಬಳ್ಳಾರಿಯ ಹೊಂಗಿರಣ ಸಭಾಂಗಣದಲ್ಲಿ ಜರುಗಿದ ಕೆಎಎಸ್ ಪರೀಕ್ಷೆಗೆ ಉಚಿತವಾಗಿ ತರಬೇತಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ 5 ತಿಂಗಳ ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಚಾಲನೆ ನೀಡಿ ಮಾತನಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ