ಮಡಿಕೇರಿಯಲ್ಲಿ ಗಮನ ಸೆಳೆದ ಪುತ್ತರಿ ಕೋಲಾಟ

KannadaprabhaNewsNetwork |  
Published : Dec 17, 2024, 01:03 AM IST
ಪುತ್ತರಿ ಕೋಲಾಟ | Kannada Prabha

ಸಾರಾಂಶ

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪುತ್ತರಿ ಕೋಲಾಟಕ್ಕೆ ಚಾಲನೆ ನೀಡಿ ಶುಭ ಕೋರಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಕೋಟೆ ಆವರಣದಲ್ಲಿ ಮಡಿಕೇರಿ ಕೊಡವ ಸಮಾಜ, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಮತ್ತು ಹೆಬ್ಬೆಟ್ಟಗೇರಿಯ ಪಾಂಡೀರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಪುತ್ತರಿ ಕೋಲಾಟ ಕಾರ್ಯಕ್ರಮ ನಡೆಯಿತು.

ಮಾಜಿ ಶಾಸಕ ಕೆ.ಜಿ ಬೋಪಯ್ಯ ದೀಪ ಬೆಳಗುವ ಮೂಲಕ ಪುತ್ತರಿ ಕೋಲಾಟಕ್ಕೆ ಚಾಲನೆ ನೀಡಿ ಶುಭ ಕೋರಿದರು.

ಕೊಡಗಿನ ಆಚಾರ, ವಿಚಾರ ಸಂಸ್ಕೃತಿ ಕಲೆಗಳು ಶಾಶ್ವತವಾಗಿ ಉಳಿಯಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೆ.ಜಿ. ಬೋಪಯ್ಯ ಹೇಳಿದರು. ಮೊದಲು ಗದ್ದುಗೆ ಆವರಣದಲ್ಲಿ ಪಾಂಡೀರ ಕುಟುಂಬಸ್ಥರು ಆಚರಿಸುತ್ತಿದ್ದ ಪುತ್ತರಿ ಕೋಲಾಟವನ್ನು ತಾವು ಮೊದಲ ಬಾರಿಗೆ ಶಾಸಕರಾದ ಸಂದರ್ಭ ಅರಮನೆ ಮೈದಾನಕ್ಕೆ ಸ್ಥಳಾಂತರಿಸಿದ ಕುರಿತು ಇದೇ ಸಂದರ್ಭ ಬೋಪಯ್ಯ ಹೇಳಿದರು.

ಪಾಂಡೀರ ಕುಟುಂಬ ಸದಸ್ಯ ಪಾಂಡೀರ ಮುತಣ್ಣ ಮಾತನಾಡಿ, ಹಾಲೇರಿ ರಾಜರ ಕಾಲದಿಂದಲೇ ಪುತ್ತರಿ ಹಬ್ಬದ ಮರು ದಿನ ಪುತ್ತರಿ ಕೋಲಾಟವನ್ನು ನಡೆಸಿಕೊಂಡು ಬರಲಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ತರಿ ಕೋಲಾಟಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಪಾಂಡೀರ ಕುಟುಂಬಸ್ಥರಿಂದ ಪ್ರಾರಂಭಿಕವಾಗಿ ಪುತ್ತರಿ ಕೋಲಾಟ ನಡೆಯಿತು. ಪಾಂಡೀರ ಕುಟುಂಬದ ಮಹಿಳಾ ಸದಸ್ಯರಿಂದ ನಡೆದ ಉಮ್ಮತ್ತಾಟ್, ತಾಲಿಪಾಟ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾಗಿ ವಿವಿಧ ನೃತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಡಿಕೇರಿ ಕೊಡವ ಸಮಾಜದಿಂದ ಕೋಲಾಟ್, ಉಮ್ಮತ್ತಾಟ್, ಪರೆಯಕಳಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ನೆರೆದಿದ್ದವರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಡಿಕೇರಿ ನಗರ ಸಭೆ ಮಾಜಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಪಾಂಡೀರ ವಿಜಯ, ಪಾಂಡೀರ ಮುತ್ತಣ್ಣ, ಸಜನ್ ಪೂಣಚ್ಚ, ಸಂತೋಷ್ ಸೇರಿದಂತೆ ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿ ಕನ್ನಂಡ ಸಂಪತ್, ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು, ವಿವಿಧ ಕೊಡವ ಕೇರಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ