ನಾಪೋಕ್ಲು: ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಪ್ರದಾಯದಂತೆ ನ.19ರಂದು ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಪರಂಪರಾಗತ ‘ಪತ್ತೆಪರೆ’ಯಲ್ಲಿ ಬೆಳಗ್ಗೆ 10.30ಕ್ಕೆ ದೇವತಕ್ಕರು ಮತ್ತು ತಕ್ಕಮುಖ್ಯಸ್ಥ ರು ನಾಡುತಕ್ಕರನ್ನೊಳಗೊಂಡ ಸಭೆಯಲ್ಲಿ ದೇವಸ್ಥಾನದ ಜ್ಯೋತಿಷ್ಯ ಶಾಸ್ತ್ರಾಧಿಕಾರಿಗಳಾದ ಅಮ್ಮಂಗೇರಿ ಕಣಿಯರಿಂದ ಪುತ್ತರಿ ದಿನ ಮತ್ತು ಕದಿರು ತೆಗೆಯುವ ಶುಭ ಗಳಿಗೆಯನ್ನು ನಿಗದಿಗೊಳಿಸಲಾಗುವುದು.ಅಂದೇ ಮಧ್ಯಾಹ್ನದ ನಿತ್ಯ ಪೂಜೆಯ ನಂತರ ಮಧ್ಯಾಹ್ನ ಆದಿ ಸ್ಥಾನ ಮಲ್ಮದಲ್ಲಿ ದೇಶಕಟ್ಟು ಜಾರಿಯಾಗಲಿದೆ. ದೇಶಕಟ್ಟು ಡಿಸೆಂಬರ್ ನಾಲ್ಕರ ಬಿರ್ಚ್ಯಾರ್ ಕಲ್ಲಾಡ್ಚ ನಮ್ಮೆ ಯವರೆಗೂ ಜಾರಿಯಲ್ಲಿದ್ದು, ಅಂದು ಮಲ್ಮದಲ್ಲಿ ಸಾಂಪ್ರದಾಯಿಕ ವಿಧಿವಿಧಾನದೊಂದಿಗೆ ಮತ್ತು ಉತ್ಸವ ಮೂರ್ತಿಯನ್ನು ಮಲ್ಮ ಬೆಟ್ಟಕ್ಕೆ ಕೊಂಡೊಯ್ದು, ಪಾಡಿ, ನೆಲಜಿ, ಪೇರೂರುವಿನಿಂದ ವಿವಿಧ ತಕ್ಕಮುಖ್ಯಸ್ಥರ ಐನ್‌ಮನೆಗಳಿಂದ ಆಗಮಿಸುವ ಎತ್ತುಪೊರಾಟದೊಂದಿಗೆ (ಜೋಡೆತ್ತುಗಳ ಪೋರಾಟ) ಆದಿಸ್ಥಾನ ಮಲ್ಮದಲ್ಲಿ ಒಟ್ಟುಗೂಡಿ ಮಲ್ಮದ ದೇವನೆಲೆಯ ಪ್ರದಕ್ಷಿಣೆಯ ತರುವಾಯ ನೈವೇದ್ಯ ಅರ್ಪಣೆಗೂ ಮುನ್ನ ಸಾಂಪ್ರದಾಯಿಕವಾಗಿ ತಂದಂತಹ ‘ಪೋರ್’ ಅಂದರೆ ಜೋಡೆತ್ತುಗಳೊಂದಿಗೆ ತಂದಂತಹ ಧಾನ್ಯದ ರಾಶಿಯನ್ನು ಒಟ್ಟಿಗೆ ಸುರಿದು ಸಂಜೆ ವೇಳೆಗೆ ದೇವತಕ್ಕರು ಅದನ್ನು ಇಬ್ಭಾಗ ಮಾಡುವುದರೊಂದಿಗೆ ದೇಶಕಟ್ಟು ಕೊನೆಗೊಳ್ಳಲಿದೆ.ದೇಶಕಟ್ಟಿನ ವೈಶಿಷ್ಟ್ಯತೆ:
ಪುತ್ತರಿ ನಮ್ಮೆಯ ಸಡಗರದೊಂದಿಗೆ ಪ್ರಾಚೀನ ಸಂಪ್ರದಾಯದಂತೆ ದೇವತಕ್ಕರು ವಿಧಿಸುವ ಕಟ್ಟುಪಾಡುಗಳಿಗೆ ಅನುಗುಣವಾಗಿ ಕೊಡವ ಸಂಪ್ರದಾಯದಂತೆ ದೇಶಕಟ್ಟು ಜಾರಿಯಾದ ಸಂದರ್ಭದಲ್ಲಿ ಆಡಂಬರದ ಕಾರ್ಯಕ್ರಮಗಳಾದ ಮದುವೆ ಅಥವಾ ನಿಶ್ಚಿತಾರ್ಥ, ನಾಮಕರಣದಂತಹ ಸಮಾರಂಭಗಳು ಮತ್ತು ಪ್ರಾಣಿಹಿಂಸೆ, ಪ್ರಾಣಿ ಬಲಿ ನಿಷಿದ್ಧವಾಗಿರುತ್ತದೆ. ಅಮಾವಾಸ್ಯೆಯ ಆರಂಭದೊಂದಿಗೆ ಮಲ್ಮದಲ್ಲಿ ದೇವತಕ್ಕರ ಪ್ರಾರ್ಥನೆಯೊಂದಿಗೆ ಶುರುವಾಗುವ ಈ ಪ್ರಾಚೀನ ಕಟ್ಟುಪಾಡು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುವ ಚಂದ್ರನ ಪಥಕ್ಕೆ ಅನುಗುಣವಾಗಿ ಅಂತಿಮವಾಗಿ ಹುಣ್ಣಿಮೆಯ ದಿನದಂದು ಅಥವಾ ಹುಣ್ಣಿಮೆಯ ಮುನ್ನಾದಿನ ಅಂತ್ಯಗೊಂಡು, ಸಂಭ್ರಮದ, ಧಾನ್ಯಲಕ್ಷ್ಮೀಯನ್ನು ಬರಮಾಡಿಕೊಳ್ಳುವ ‘ಪುತ್ತರಿ’ಗೆ ನಾಂದಿಯಾಗಲಿದೆ.ಈ ಕಟ್ಟುಪಾಡುಗಳು ಪ್ರಾಚೀನ ಇತಿಹಾಸ ಹೊಂದಿದ್ದು, ಕೊಡವ ಸಂಪ್ರದಾಯದಂತೆ ಈ ದೇಶಕಟ್ಟಿನ ದಿನಗಳು ವೃದ್ಧಿ, ಸಮೃದ್ಧಿಯ ಧ್ಯೋತಕವಾಗಿವೆ. ಈ ಸಂದರ್ಭದಲ್ಲಿ ಕೊಡಗಿನ ಭಕ್ತಾಧಿಗಳು ಪ್ರಾಚೀನ ದೇಶಕಟ್ಟಿನ ನಿಯಮಗಳಿಗೆ ಮನ್ನಣೆ ನೀಡುವಂತೆ ಪಾಡಿ ದೇವನೆಲೆಯ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.