ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಅನಾರೋಗ್ಯದಿಂದ ಬೇಸರಗೊಂಡು ‘ನನ್ನ ಸಾವಿಗೆ ನಾನೇ ಕಾರಣ’ಎಂಬ ಬರಹವನ್ನು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಹಾಕಿ, ಆತ್ಮಹತ್ಯೆಗೆ ಶರಣಾದ ಸಾಹಿತಿ ಹಾಗೂ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ ಅವರ ನಿಧನದಿಂದ ಸಾಹಿತ್ಯ ಹಾಗೂ ಪರಿಸರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಬಿ.ಪುಟ್ಟಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ, ಭೂಹಳ್ಳಿ ಪುಟ್ಟಸ್ವಾಮಿ ಅವರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದ ಅವರು, ಪುಟ್ಟಸ್ವಾಮಿ ಕವಿ, ಪರಿಸರವಾದಿ, ಸಮಾಜಮುಖಿ ಚಿಂತಕರಾಗಿದ್ದರು. ಅವರು ಆಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಅವರು, ತಮ್ಮ ಸ್ವಂತ ಹಣದಲ್ಲೇ ಸರ್ಕಾರಿ ಜಾಗದಲ್ಲಿ ಸಸಿ ನೆಡುವ ಕೆಲಸ ಮಾಡಿದ್ದರು. ತಾಲೂಕಿನ ವಿವಿಧೆಡೆ ಸುಮಾರು ೪೦ ಎಕರೆ ಭೂಮಿಯಲ್ಲಿ ಸಸಿಗಳನ್ನು ನೆಟ್ಟು, ಸಾವಿರಾರು ಗಿಡಗಳು ಮರಗಳಾಗಿ ಬೆಳೆಯುವಂತೆ ಮಾಡಿದ್ದರು. ಅವರ ಅಗಲಿಕೆ ನೋವು ತರಿಸಿದೆ ಎಂದು ಹೇಳಿದರು.ನಿವೃತ್ತ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಎಚ್.ಆರ್.ರಾಮಚಂದ್ರಯ್ಯ ಮಾತನಾಡಿ, ತನ್ನ ಸ್ವಂತ ಹಣದಿಂದ ಗಿಡಬೆಳೆಸಿ ಬುದ್ಧವನ, ಬುದ್ಧೇಶ್ವರವನ (ಕವಿವನ), ಜೀವೇಶ್ವರ ವನ, ಹೀಗೆ ವನಗಳಿಗೆ ಹೆಸರು ನಾಮಕರಣ ಮಾಡಿದ್ದಾರೆ. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ವೇದಿಕೆ ನಿರ್ಮಿಸಿ, ಗ್ರಂಥಾಲಯ ಕಟ್ಟಿಸಿದ್ದಾರೆ. ಈ ಸಮಾಜದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಹಠ ಛಲ ಇವರದಾಗಿತ್ತು ಎಂದು ಸ್ಮರಿಸಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಪುಟ್ಟಸ್ವಾಮಿ ಅವರಿಗೆ ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಸಮ್ಮುಖದಲ್ಲಿ ‘ಚುಟುಕು ಸಾಹಿತ್ಯ ಕೌಸ್ತುಭ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಸುಮಾರು ೨೫ಕ್ಕೂ ಹೆಚ್ಚು ಕವನ ಸಂಕಲಗಳನ್ನು ಪ್ರಕಟಿಸಿದ್ದರು. ನೆಲದ ಕಂಬನಿ, ಗೋಜಲು, ಬೆಳದಿಂಗಳ ಕುಡಿ ,ಲಾವಣಿ ಹಾಡು, ಅಕ್ಷರ ಗುಡಿ ನಾಟಕ, ಸ್ವಾತಂತ್ರ್ಯಕ್ಕೆ ಜೀವವಿದೆ ಎಂಬ ಹಲವು ಕವನ ಸಂಕಲಗಳನ್ನು ಬರೆದಿರುವ ಕೀರ್ತಿ ಭೂಹಳ್ಳಿ ಪುಟ್ಟಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ನಿವೃತ್ತ ಮುಖ್ಯೋಪಾಧ್ಯಾಯ ಚ.ಸೀ.ವೆಂಕಟೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಪ್ಪ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ ಮಾತನಾಡಿದರು.
ನಿವೃತ್ತ ಖಜಾನಾಧಿಕಾರಿ ಸಿ.ಎಸ್.ಶ್ರೀಕಂಠಯ್ಯ, ಹಾಪ್‌ಕಾಮ್ಸ್ ಪುಟ್ಟ ಸ್ವಾಮಿ, ಟೈಲರ್ ದೊಡ್ಡಯ್ಯ, ಚಿಕ್ಕನ ದೊಡ್ಡಿ ಸುರೇಶ್, ನಾಗರಾಜು ಮತ್ತಿತರರಿದ್ದರು.