ಸಹಪಾಠಿ ಶ್ರೀಪಾದರೊಂದಿಗೆ ಜನ್ಮದಿನ ಆಚರಿಸಿದ ಪುತ್ತಿಗೆ ಶ್ರೀಗಳು

KannadaprabhaNewsNetwork |  
Published : Sep 11, 2024, 01:03 AM IST
ಜನ್ಮದಿನ10 | Kannada Prabha

ಸಾರಾಂಶ

ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರವನ್ನು ತಮ್ಮ ಶಾಸ್ತ್ರಾಧ್ಯಯನದ ಸಹಪಾಠಿಗಳೊಂದಿಗೆ ಮಂಗಳವಾರ ಆಚರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರವನ್ನು ತಮ್ಮ ಶಾಸ್ತ್ರಾಧ್ಯಯನದ ಸಹಪಾಠಿಗಳೊಂದಿಗೆ ಮಂಗಳವಾರ ಆಚರಿಸಿದರು.

ಶ್ರೀಗಳೊಂದಿಗೆ ಶಾಸ್ತ್ರಾಭ್ಯಾಸ ಮಾಡಿದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಮಠಾಧೀಶ ಶ್ರೀ ವಿದ್ವೇಶತೀರ್ಥ ಶ್ರೀಪಾದರು ಪರ್ಯಾಯ ಶ್ರೀಗಳಿಗೆ ಗಂಧಾದ್ಯುಪಚಾರಗಳಿಂದ ಗೌರವಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು. ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರಿಂದ್ರ ತೀರ್ಥ ಶ್ರೀಪಾದರು ತಮ್ಮ ಗುರುಗಳಿಗೆ ಹೂವಿನ ಕಿರೀಟವನ್ನು ತೊಡಿಸಿ ಸಂಭ್ರಮಿಸಿದರು.ಅನೇಕ ವಿದ್ವಾಂಸರ ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ಅನೇಕ ಹಳೆವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಕೃಷ್ಣಮಠದಲ್ಲಿ ಜರುಗಿದ ಈ ಸಮಾರಂಭದಲ್ಲಿ ಪರ್ಯಾಯ ಮಠದ ವತಿಯಿಂದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯರು ಅದಮಾರು ಮತ್ತು ಭಂಡಾರಕೇರಿ ಶ್ರೀಪಾದಂಗಳವರನ್ನು ಮಾಲಿಕೆ ಮಂಗಳಾರತಿ ಮಾಡಿ ಸಂಸ್ಥಾನಗೌರವವನ್ನು ಅರ್ಪಿಸಿದರು.ಪರ್ಯಾಯ ಶ್ರೀಗಳು, ತಮ್ಮ ವಿದ್ಯಾಭ್ಯಾಸ ಕಾಲವನ್ನು ಸ್ಮರಿಸುತ್ತಾ ತಮ್ಮ ಈರ್ವರು ಸಹಪಾಠಿಗಳ ಉಪಸ್ಥಿತಿಯಲ್ಲಿ ತಮ್ಮ ಜನ್ಮದಿನಾಚರಣೆಯನ್ನು ಮಾಡಿಕೊಳ್ಳುತ್ತಿರುವ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸಿ, ತಮ್ಮೆಲ್ಲ ಸಾಧನೆಗಳಿಗೆ ಸ್ಫೂರ್ತಿದಾಯಕರಾಗಿದ್ದ ಅದಮಾರು ಮಠದ ಕೀರ್ತಿಶೇಷ ಶ್ರೀ ವಿಭುಧೇಶ ತೀರ್ಥರನ್ನು ನೆನಪಿಸಿಕೊಂಡರು.ಅದಮಾರು ಶ್ರೀಪಾದರು ಶ್ರೀಪುತ್ತಿಗೆ ಶ್ರೀಗಳನ್ನು ಶಾಲು ಹೊದಿಸಿ ಸನ್ಮಾನಿಸಿ, ಶ್ರೀಪಾದರು ವಿಶ್ವಂಭರನೆನಿಸಿದ ಗಣೇಶನ ಹಬ್ಬದ ದಿನಗಳ ಮಧ್ಯೆ ಹುಟ್ಟಿದ್ದರಿಂದ ವಿಶ್ವದಾದ್ಯಂತ ಧರ್ಮಪ್ರಚಾರ ಮಾಡುತ್ತಾ ವಿಶ್ವಂಭರನ ಕೃಪೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಅನುಗ್ರಹಿಸಿದರು.ಭಂಡಾರಕೇರಿ ಶ್ರೀಪಾದರು ಪುತ್ತಿಗೆ ಶ್ರೀಯವರನ್ನು ಗೌರವಿಸಿ, ಶ್ರೀಗಳ ಬಾಲ್ಯ ಸಾಧನೆಗಳನ್ನು ನೆನಪಿಸಿ, ಧರ್ಮ ಪ್ರಚಾರಕ್ಕೆ ಶ್ರೀಪಾದರು ಸುಗುಣ ವಿದ್ಯಾಪೀಠ ಮತ್ತು ಸುಗುಣಮಾಲಾ ಪತ್ರಿಕೆಗಳ ರೂಪದಲ್ಲಿ ಧರ್ಮಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿ ಶುಭಕೋರಿದರು.ಪುತ್ತಿಗೆ ಕಿರಿಯ ಶ್ರೀಪಾದರು ಮಾತನಾಡಿ, ಗುರುಗಳು 63ರಂತೆ ಇಲ್ಲದೆ 36 ವರ್ಷದಂತೆ ಯುವ ಉತ್ಸಾಹದಲ್ಲಿ ಕರ್ತವ್ಯಗಳನ್ನು ನಡೆಸುತ್ತಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಗ್ರಹದಿಂದ ನಾವು ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭ ಪುತ್ತಿಗೆ ಶ್ರೀಪಾದರ ಎರಡು ಕೃತಿಗಳನ್ನು ಅದಮಾರು ಹಿರಿಯ ಶ್ರೀಪಾದರು ಮತ್ತು ಭಂಡಾರಕೇರಿ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು. ಕೃತಿ ಸಂಗ್ರಹವನ್ನು ಮಾಡಿ ಪ್ರಕಟಿಸಲು ಶ್ರಮಿಸಿದ ಶ್ರೀ ಓಂಪ್ರಕಾಶ ಭಟ್ಟರನ್ನು ಶ್ರೀಪಾದರು ಗೌರವಿಸಿದರು. ಶ್ರೀಮಠದ ವಿದ್ವಾಂಸ ವಿದ್ವಾನ್ ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಟಿಪ್ಪರ್‌
ಗಡಿನಾಡು ಬೆಳಗಾವಿ ಕನ್ನಡಿಗರ ದೊಡ್ಡ ಅಸ್ಮಿತೆ