ದೇಶಭಕ್ತಿಯಿಂದ ಧರ್ಮ, ದೇಶ ಉಳಿವು ಸಾಧ್ಯ

KannadaprabhaNewsNetwork | Published : Sep 11, 2024 1:03 AM

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ಯುವಕರು ದುಶ್ಚಟಗಳ ದಾಸರಾಗದೇ ದೇಶಭಕ್ತಿ ಮೈಗೂಡಿಸಿಕೊಂಡರೆ ಹಿಂದೂ ಧರ್ಮ ಹಾಗೂ ದೇಶವನ್ನು ಉಳಿಸಲು ಸಾಧ್ಯ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ಶ್ರೀಗಳು ಹೇಳಿದರು. ಪಟ್ಟಣದ ಸಂಗಮೇಶ್ವರ ಸರ್ಕಲ್‌ನಲ್ಲಿ ಸರ್ವ ಗಜಾನನ ಮಂಡಳಿ ಸಹಯೋಗದಲ್ಲಿ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಧೂಮಪಾನ ಹಾಗೂ ಮಧ್ಯಪಾನ ವ್ಯಸನಿಗಳಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ:

ಯುವಕರು ದುಶ್ಚಟಗಳ ದಾಸರಾಗದೇ ದೇಶಭಕ್ತಿ ಮೈಗೂಡಿಸಿಕೊಂಡರೆ ಹಿಂದೂ ಧರ್ಮ ಹಾಗೂ ದೇಶವನ್ನು ಉಳಿಸಲು ಸಾಧ್ಯ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ಶ್ರೀಗಳು ಹೇಳಿದರು.

ಪಟ್ಟಣದ ಸಂಗಮೇಶ್ವರ ಸರ್ಕಲ್‌ನಲ್ಲಿ ಸರ್ವ ಗಜಾನನ ಮಂಡಳಿ ಸಹಯೋಗದಲ್ಲಿ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಧೂಮಪಾನ ಹಾಗೂ ಮಧ್ಯಪಾನ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಅವರು ತಮ್ಮ ಆರೋಗ್ಯವನ್ನು ಹಾಗೂ ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಎಲ್ಲ ಶ್ರೀಗಳ ಸಹಯೋಗದಲ್ಲಿ ತಾಳಿಕೋಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರಲ್ಲಿರುವ ದುಶ್ಚಟಗಳನ್ನು ಬಿಡಿಸಲು ದುಶ್ಚಟಗಳ ಜೋಳಿಗೆವೆಂಬ ವಿನೂತನ ಕಾರ್ಯಕ್ರಮ ಮಾಡಿ ಯುವಕರಲ್ಲಿರುವ ದುಶ್ಚಟಗಳನ್ನು ಬಿಡಿಸಲಾಯಿತು ಎಂದರು.ಸಮಾಜದಲ್ಲಿ ಪ್ರತಿಯೊಬ್ಬರು ಹಿಂದೂ ಧರ್ಮದ ದೀಪವನ್ನು ಹಚ್ಚುವ ಕೆಲಸ ಮಾಡಬೇಕು, ಆದರೆ ಪರಸ್ಪರರಲ್ಲಿ ಜಾತಿ,ಧರ್ಮ, ಮೇಲು, ಕೀಳು ಎಂಬ ಭಾವನೆಗಳನ್ನು ಮೂಡಿಸಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಸೂಜಿ ಎಷ್ಟೆ ಸಣ್ಣದಿದ್ದರೂ ಒಂದನ್ನೊಂದು ಜೋಡಿಸುವ ದೊಡ್ಡ ಕೆಲಸ ಮಾಡಿದ್ರೆ, ಕತ್ತರಿ ಎಷ್ಟೇ ದೊಡ್ಡದಿದ್ದರೂ ಕತ್ತರಿಸುವ ಕೆಲಸ ಮಾಡುತ್ತದೆ. ಸಮಾಜದಲ್ಲಿ ವಸ್ತು ಹಾಗೂ ವ್ಯಕ್ತಿಗಳು ಪ್ರಶ್ನೆ ಬರುವುದಿಲ್ಲ, ಅವರು ಮಾಡುವ ಕೆಲಸ ಒಳ್ಳೆಯದಾಗಿರಬೇಕು ಎಂಬ ಸಂದೇಶ ನೀಡಿದರು.ದೇಶದ ಮೇಲೆ ಅನೇಕರು ದಾಳಿ ಮಾಡಿ ಇಲ್ಲಿನ ಸಿರಿ ಸಂಪತ್ತನ್ನು ದೋಚಿಕೊಂಡು ಹೋದರು. ಆದರೆ ಕುಗ್ಗದೆ, ಜಗ್ಗದೆ ಅಲ್ಲಾಡದೆ ತಲೆ ಎತ್ತಿ ನಿಂತಿದೆ ಅಂದರೆ, ಅದಕ್ಕೆ ಇಲ್ಲಿರುವ ಶ್ರೀಮಂತಿಕೆ ಹಾಗೂ ಸಂಸ್ಕೃತಿ ಕಾರಣ. ಅದನ್ನು ಇಂದಿನ ಯುವಕರು ಎತ್ತಿ ಹಿಡಿಯಬೇಕಾಗಿದೆ ಎಂದರು. ಸಮಾಜದಲ್ಲಿ ಮೋಸ ,ವಂಚನೆ, ಕಳ್ಳತನ, ಜೂಜಾಟ, ಅತ್ಯಾಚಾರದಂತಹ ಘಟನೆಗಳು ಹೆಚ್ಚಾಗಿವೆ. ಅವುಗಳನ್ನು ಮಟ್ಟ ಹಾಕಬೇಕಾಗಿದೆ. ಇವತ್ತು ಕೊಲ್ಹಾರ ಪಟ್ಟಣದಲ್ಲಿ ಧರ್ಮಸಭೆಯನ್ನು ಆಯೋಜಿಸಿ ಹಿಂದೂ ಧರ್ಮದಲ್ಲಿರುವ ಯುವಕರನ್ನು, ಮಹಿಳೆಯರನ್ನು, ಹಿರಿಯರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಅವುಗಳು ನಮಗೆ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸಲು ಬರುತ್ತವೆ. ಇಂತಹ ಹಬ್ಬಗಳಲ್ಲಿ ಧರ್ಮ ಸಭೆಗಳನ್ನು ಆಯೋಜಿಸಿದ್ದು ಸಂತೋಷ. ಗಣೇಶೋತ್ಸವ ಸರ್ವ ಧರ್ಮೀಯರು ಆಚರಿಸುವ ಹಬ್ಬ. ಇದನ್ನು ಬಾಲಗಂಗಾಧರ ತಿಲಕರು ಜಾರಿಗೆ ತಂದರು. ಇಂತಹ ಧರ್ಮಸಭೆಗಳನ್ನು ಮಾಡುವುದರಿಂದ ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ. ಈ ಹಿಂದೆ ಗುರುಕುಲ ಶಿಕ್ಷಣ ಪಧ್ಧತಿಯಲ್ಲಿ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಕಲಿಸುತ್ತಿದ್ದರು. ಆದರೆ ಇಂದಿನ ಶಿಕ್ಷಣ ಪಧ್ಧತಿಯಲ್ಲಿ ಇಲ್ಲ. ಹಿಂದೂ ಧರ್ಮ ಜಗತ್ತಿನಲ್ಲಿ ಶ್ರೇಷ್ಠ ಧರ್ಮ ಅದನ್ನು ಉಳಿಸುವ, ಬೆಳೆಸುವ ಕೆಲಸ ಯುವಶಕ್ತಿ ಮಾಡಬೇಕಾಗಿದೆ ಎಂದು ಹೇಳಿದರು.ಪಟ್ಟಣದ ದಿಗಂಬರಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳು, ಬೇಲೂರು-ಕೊಲ್ಹಾರ ಹಿರೇಮಠದ ಪಟ್ಟದ ದೇವರಾದ ಪ್ರಭುಕುಮಾರ ಶಿವಾಚಾರ್ಯರು, ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀ ಪ್ರಾಸ್ತಾವಿಕವಾಗಿ ಬಾಗಲಕೋಟ ಯುವ ಬ್ರಿಗೇಡ್ ಸಂಚಾಲಕ ಪ್ರವೀಣ ನಾಯ್ಕರ ಮಾತನಾಡಿದರು. ಸಚಿನ ಕೆಲವಡಿ ಸ್ವಾಗತಿಸಿದರು, ಸಿಆರ್‌ಪಿ ಜಿ.ಐ.ಗೊಡ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.

Share this article