, ಬೆಂಗಳೂರು : ಸಮರ್ಪಕ ಔಷಧ ಪೂರೈಕೆ, ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ, ವರ್ಗಾವಣೆ ನೀತಿ, ಖಾಲಿ ಹುದ್ದೆ ಭರ್ತಿ, ವೈದ್ಯರ ಮೇಲಿನ ಶೋಷಣೆ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ನಾಳೆಯಿಂದ (ಮಾ.11) ಮಾ. 15ರವರೆಗೆ ಹೊರರೋಗಿಗಳ (ಒಪಿಡಿ) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ। ರವೀಂದ್ರನಾಥ್ ಎಂ.ಮೇಟಿ ಅವರು, ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಒಂದು ತಿಂಗಳ ಹಿಂದೆಯೇ ತಿಳಿಸಿದ್ದೇವೆ. ಈವರೆಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಸ್ಪಷ್ಟ ಭರವಸೆ ಸಿಕ್ಕಿಲ್ಲ. ನಾಳೆಯೂ (ಮಾ.10) ನಮ್ಮನ್ನು ಯಾರೂ ಸಂಧಾನಕ್ಕೆ ಕರೆದಿಲ್ಲ. ಹೀಗಾಗಿ ನಮ್ಮ ನಿರ್ಧಾರ ಅಚಲವಾಗಿದ್ದು ಮಾ.11 ರಿಂದ ಒಪಿಡಿ ಸೇವೆ ಬಂದ್ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಉಂಟಾಗುತ್ತಿದ್ದು ಸಮರ್ಪಕವಾಗಿ ಔಷಧಿ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು. ಇಲಾಖೆಯ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ, ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ, ನೌಕರರನ್ನೇ ನಿಯೋಜಿಸಬೇಕು ಎಂದು ಆಗ್ರಹಿಸಿದ್ದೇವೆ.
ಜತೆಗೆ ಖಾಲಿಯಿರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಇದಲ್ಲದೆ ಸರ್ಕಾರಿ ವೈದ್ಯರು ಕರ್ತವ್ಯದ ಬಳಿ ಖಾಸಗಿ ಪ್ರಾಕ್ಟಿಸ್ ವೇಳೆ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ಹೊರಡಿಸಿರುವ ವಿವೇವಚನಾ ರಹಿತ ಆದೇಶಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಒಪಿಡಿ ಬಂದ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಾ.16ರಿಂದ ತುರ್ತು
ಸೇವೆಯೂ ಬಂದ್
ಮಾ.11 ರಿಂದ ಮಾ.15ರವರೆಗೆ ಒಪಿಡಿ ಸೇವೆ ಬಂದ್ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರವು ಸ್ಪಂದಿಸದಿದ್ದರೆ ಮಾ.16 ರಿಂದ ತುರ್ತು ಹಾಗೂ ಒಳರೋಗಿ ಸೇವೆಗೂ ಹಾಜರಾಗದೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ. ಎಸ್ಮಾ ಜಾರಿ ಎಚ್ಚರಿಕೆ ನೀಡಿದರೂ ಜಗ್ಗಲ್ಲ ಎಂದು ರವೀಂದ್ರನಾಥ್ ಮೇಟಿ ಹೇಳಿದ್ದಾರೆ.
ಔಷಧ ಖರೀದಿಸದ ವೈದ್ಯರ ವಿರುದ್ಧ ಕ್ರಮ: ಸರ್ಕಾರ
ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹಾಗೂ ಆರೋಗ್ಯ ರಕ್ಷಾ ಸಮಿತಿ (ಎಆರ್‌ಎಸ್) ನಿಧಿಯಿಂದ ಔಷಧ ಖರೀದಿಸಿ ಜನರಿಗೆ ಪೂರೈಸಲು ನಿರಾಕರಿಸುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಔಷಧ ಖರೀದಿ ಮಾಡದಿದ್ದರೆ ಕೆಸಿಎಸ್ಆರ್ ನಿಯಮದಡಿ ದುರ್ನಡತೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರಿಗೆ ನಿರ್ದೇಶನ ನೀಡಿದೆ.
ಔಷಧ ಪೂರೈಕೆ ಸರ್ಕಾರದ ಹೊಣೆ: ವೈದ್ಯರ ಆಕ್ರೋಶ
ಬೆಂಗಳೂರು: ವೈದ್ಯಾಧಿಕಾರಿಗಳು ಔಷಧ ಖರೀದಿಸಲು ನಿರಾಕರಿಸಿದರೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಔಷಧ ಖರೀದಿಸಿ ಪೂರೈಸಬೇಕಾಗಿರುವುದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ಜವಾಬ್ದಾರಿ. ಅವರು ಖರೀದಿಗೆ ವಿಫಲವಾದಾಗ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಮೇಲೆ ಯಾಕೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಪ್ರಶ್ನಿಸಿದ್ದಾರೆ.
