ಧಾರವಾಡ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮಾ. 11ರಿಂದ ಮಾ. 15ರ ವರೆಗೆ ಅನಿರ್ದಿಷ್ಟವಾದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ, ನೌಕರರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ದೇವಿದಾಸ್ ಶಾಂತಿಕರ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳ ವತಿಯಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಮಾ. 11 ರಿಂದ 15ರ ವರೆಗೆ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲ ವೃಂದದ ವೈದ್ಯರು, ಅಧಿಕಾರಿ-ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ, ತುರ್ತು ಸೇವೆ ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುವುದು ಎಂದರು.
16ರಿಂದ ಗೈರು:ಎರಡನೇ ಹಂತದಲ್ಲಿ ಮಾ. 16ರಿಂದ ಬೇಡಿಕೆ ಈಡೇರುವ ವರೆಗೂ ಕರ್ತವ್ಯಕ್ಕೆ ಅನಿರ್ದಿಷ್ಟಾವಧಿ ವರೆಗೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಾಗುವುದು. ಸರ್ಕಾರಿ ಆಸ್ಪತ್ರೆಗಳಿಗೆ ಕಾಲ-ಕಾಲಕ್ಕೆ ಸಮರ್ಪಕವಾಗಿ ಔಷಧಿ ಪೂರೈಸಬೇಕು. 1973ರಿಂದ ಈ ವರೆಗೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಜತೆಗೆ ಇಲಾಖೆಯ ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆ ಸರಿಪಡಿಸದೆ ಅವೈಜ್ಞಾನಿಕವಾಗಿ ಕೌನ್ಸೆಲಿಂಗ್ ವರ್ಗಾವಣೆ ಮಾಡುತ್ತಿರುವುದನ್ನು ಸರಿಪಡಿಸಬೇಕು ಮತ್ತು ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ಬೇಡಿಕೆ ಮುಂದಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡ, ಡಾ. ಪರಶುರಾಮ ಎಫ್.ಕೆ., ಚಂದ್ರಿಕಾ ದಂಬಳ್ಳಿ, ಜಿ.ವಿ. ಓಂಕಾರಗೌಡ್ರ, ಬಿ.ಆರ್. ಪಾತ್ರೋಟ್ ಇದ್ದರು.