ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಮೆರವಣಿಗೆ

KannadaprabhaNewsNetwork | Published : Mar 1, 2025 1:04 AM

ಸಾರಾಂಶ

ಚೌಟರ ಅರಮನೆಯ ಆರಾಧ್ಯ ಮೂರ್ತಿ, 18 ಮಾಗಣೆಗಳ ಶ್ರೀ ಕ್ಷೇತ್ರ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಹೋತ್ಸವ ಶುಕ್ರವಾರ ಆರಂಭಗೊಂಡಿದೆ. ಮೊದಲ ದಿನ ಮೂಡುಬಿದಿರೆ ಪೇಟೆ ಮತ್ತು ಆಸುಪಾಸಿನ ಗ್ರಾಮಗಳ ಜನತೆ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ಆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಚೌಟರ ಅರಮನೆಯ ಆರಾಧ್ಯ ಮೂರ್ತಿ, 18 ಮಾಗಣೆಗಳ ಶ್ರೀ ಕ್ಷೇತ್ರ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಹೋತ್ಸವ ಶುಕ್ರವಾರ ಆರಂಭಗೊಂಡಿದೆ. ಮೊದಲ ದಿನ ಮೂಡುಬಿದಿರೆ ಪೇಟೆ ಮತ್ತು ಆಸುಪಾಸಿನ ಗ್ರಾಮಗಳ ಜನತೆ ವಿಶೇಷವಾಗಿ ಸಂಘ ಸಂಸ್ಥೆಗಳು, ಊರ ಹತ್ತು ಹಲವು ದೇವಾಲಯಗಳು, ವಿವಿಧ ಸಮುದಾಯಗಳ ಬಾಂಧವರು, ಅನ್ಯ ಮತೀಯರು, ಅವರ ಸಂಘಟನೆಗಳು ಕೂಡಾ ಮಹಾದೇವನ ಮಹೋತ್ಸವಕ್ಕೆ ತಮ್ಮ ಹಸಿರು ಹೊರೆಕಾಣಿಕೆ ಸಮರ್ಪಿಸಿ ಗಮನ ಸೆಳೆದಿದ್ದಾರೆ.

ಅರಮನೆಯಿಂದ ಶುಭಾರಂಭ:

ಪೇಟೆಯಲ್ಲಿ ಚೌಟರ ಅರಮನೆಯ ರಾಜಾಂಗಣದ ಬಳಿ ಅಪರಾಹ್ನ ಎಡಪದವು ಸುಬ್ರಹ್ಮಣ್ಯ ತಂತ್ರಿ ಹಾಗೂ ದೇವಸ್ಥಾನ ವ್ಯಾಪ್ತಿಯ ಬಸದಿಗಳ ಇಂದ್ರರು ಹಾಗೂ ದೇವಸ್ಥಾನಗಳ ಅರ್ಚಕರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಚೌಟರ ಅರಮನೆಯ ಅಬ್ಬಕ್ಕ ಪ್ರತಿಮೆಗೆ ಅನಿತಾ ಸುರೇಂದ್ರ ಕುಮಾರ್ ಮಾರ್ಲಾಪಣೆ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮೋಹನ್ ಆಳ್ವ, ಅರಮನೆ ರಾಜೇಂದ್ರ, ಮೊಕ್ತೇಸರರಾದ ಕುಲದೀಪ ಎಂ., ಜಯಶ್ರೀ ಅಮರನಾಥ ಶೆಟ್ಟಿ, ಅಮರಶ್ರೀ ಅಮರನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪಟ್ನಶೆಟ್ಟಿ ಸುದೇಶ್ ಕುಮಾರ್, ಉದ್ಯಮಿ ನಾರಾಯಣ ಪಿ.ಎಂ., ಶ್ರೀಪತಿ ಭಟ್, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಪುರಸಭಾ ಮುಖ್ಯಾಧಿಕಾರಿ ಇಂದು, ಮೇಘನಾಥ್ ಶೆಟ್ಟಿ, ಹಾಗೂ ಊರ ಪ್ರಮುಖರು ವಿವಿಧ ಗ್ರಾಮಗಳ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆ ಸ್ವರಾಜ್ ಮೈದಾನ್, ರಿಂಗ್ ರೋಡ್, ಒಂಟಿಕಟ್ಟೆ, ನೆಲ್ಲಿಗುಡ್ಡೆ ಮೂಲಕ ದೇವಸ್ಥಾನಕ್ಕೆ ಸಾಗಿ ಬಂತು.

ಕಲಶಧಾರಿ ಮಹಿಳೆಯರು ಪಾಲ್ಗೊಂಡರು. ಕುಣಿತ ಭಜನೆ, ಕೊಂಬು ಚಂಡೆ, ಸಹಿತ ಮಂಗಲವಾದ್ಯಗಳ ಮೇಳ, ಶಿವ ಪಾರ್ವತಿ, ಸಹಿತ ಆಷರ್ಕಕ ಟ್ಯಾಬ್ಲೋಗಳು, ಸ್ವರ್ಣ ಶಿಖರ ಕಲಶಗಳು, ದೈವದ ಮಂಚ, ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮುಂಚೂಣಿಯಲ್ಲಿದ್ದವು.

ಅಪರಾಹ್ನ ಎರಡು ಗಂಟೆಯ ಬಳಿಕ ಆರಂಭವಾದ ಮೆರವಣಿಗೆ ಪೇಟೆಯುದ್ದಕೂ ತುಂಬಿಕೊಂಡು ಮಹೋತ್ಸವದ ಘನತೆಗೆ ಕನ್ನಡಿ ಹಿಡಿಯಿತು. ಹಸಿರು ಹೊರೆ ಕಾಣಿಕೆ, ಸ್ಟೀಲ್ ಪಾತ್ರೆಗಳನ್ನೂ ತುಂಬಿಕೊಂಡ ವಾಹನಗಳು ಭಜಕರ ಶ್ರದ್ಧಾ ಶ್ರೀಮಂತಿಕೆಗೆ ಸಾಕ್ಷಿಯಾದವು. ಸಂಜೆ ಏಳೂವರೆ ದಾಟಿದರೂ ಕ್ಷೇತ್ರಕ್ಕೆ ಆಗಮಿಸಿದ ಹೊರೆಕಾಣಿಕೆಯ ವಾಹನಗಳು ಉಗ್ರಾಣದ ಮುಂದೆ ಸಾಲುಗಟ್ಟಿ ನಿಂತಿದ್ದವು.

ಕ್ಷಣಮಾತ್ರದಲ್ಲಿ ಉಗ್ರಾಣವು ತುಂಬಿ ತುಳುಕುವಂತಿದ್ದ ವಾತಾವರಣವನ್ನು ಸೇರಿದ್ದ ಭಜಕರು ಧನ್ಯತೆಯಿಂದ ವೀಕ್ಷಿಸಿದರು.

Share this article