ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀಮದುಪೇಂದ್ರ ಮಹಾಸಂಸ್ಥಾನ ಪುತ್ತಿಗೆ ಮಠದ 29ನೇ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಮುಂಜಾನೆ 5.55ರ ಸೂರ್ಯೋದಯದ ಗಳಿಗೆಯಲ್ಲಿ ಸರ್ವಜ್ಞ ಪೀಠಾವನ್ನೇರಿ, ಎರಡು ವರ್ಷಗಳ ಕಾಲ ಕೃಷ್ಣ ಪೂಜೆಯ ಅಧಿಕಾರ ಸ್ವೀಕರಿಸಿದರು.
ಇದಕ್ಕೆ ಮೊದಲು ಬುಧವಾರ ತಡರಾತ್ರಿ ಸಂಪ್ರದಾಯದಂತೆ ಶ್ರೀಗಳು ದಂಡತೀರ್ಥ ಎಂಬಲ್ಲಿಂದ ಪವಿತ್ರಸ್ನಾನ ಮಾಡಿ, ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿ, ಅಲ್ಲಿಂದ ಲಕ್ಷಾಂತರ ಮಂದಿ ಭಕ್ತರು, ಗಣ್ಯರು ಸೇರಿದ್ದ ಭವ್ಯ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಕರೆ ತರಲಾಯಿತು. ಅದಕ್ಕಾಗಿ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗಿದೆ.ಆಚಾರ್ಯ ಮಧ್ವರು ನೀಡಿದ, ಪುತ್ತಿಗೆ ಮಠದ ಮೂಲ ಆರಾಧ್ಯಮೂರ್ತಿ ಪಾಂಡುರಂಗ ವಿಠಲನನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು, ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಜೊತೆ ದಂಡಿಗೆಯಲ್ಲಿ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕಲ್ಪನಾ ವೃತ್ತದ ಮೂಲಕ ರಥಬೀದಿಗೆ ಕರೆತರಲಾಯಿತು.
ಮಧ್ಯರಾತ್ರಿ 1 ಗಂಟೆಗೆ ಸುಮಾರು ಒಂದೂವರೆ ಕಿ.ಮೀ. ದೂರವಿರುವ ಜೋಡುಕಟ್ಟೆಯಿಂದ ಮೆರವಣಿಗೆ ರಥಬೀದಿಗೆ ಬರುವುದಕ್ಕೆ ಎರಡು ಗಂಟೆಗೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದರೆ ಮೆರವಣಿಗೆಯ ಉದ್ದ, ಭಕ್ತರ ಸಂಖ್ಯೆ, ವೈವಿಧ್ಯಮಯ ಟ್ಯಾಬ್ಲೋ, ವೇಷಧಾರಿಗಳು, ವಾದ್ಯಘೋಷಗಳ ವೈಭವವನ್ನು ಊಹಿಸಬಹುದು.
ಮೆರವಣಿಗೆಯಲ್ಲಿ ಬಂದ ಶ್ರೀಪಾದರು ಕನಕ ನವದ್ವಾರ ಕಿಂಡಿಯಲ್ಲಿ ಕೃಷ್ಣನ ದರ್ಶನ, ಅನಂತೇಶ್ವರ, ಚಂದ್ರಮೌಳಿಶ್ವರ ದೇವರ ದರ್ಶನ ಮಾಡಿ, ಕೃಷ್ಣಮಠವನ್ನು ಪ್ರವೇಶಿಸುವರು. ನಂತರ ಆಚಾರ್ಯ ಮಧ್ವರು ಕುಳಿತುಕೊಳ್ಳುತ್ತಿದ್ದ ಸರ್ವಜ್ಞಪೀಠವನ್ನು ಅಲಂಕರಿಸಿ ಕೃಷ್ಣನ ಪೂಜೆಗೆ ದೀಕ್ಷಾಬದ್ಧರಾಗುತ್ತಾರೆ.
ಸರ್ವಜ್ಞ ಪೀಠಾರೋಹಣ ಮಠದೊಳಗೆ ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ನಡೆಯುವ ಪ್ರಕ್ರಿಯೆ ಆಗಿದ್ದು, ನಂತರ ರಾಜಾಂಗಣದ ಭವ್ಯ ಅಲಂಕೃತ ವೇದಿಕೆಯಲ್ಲಿ ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ಶ್ರೀಪಾದರು ಸಾಂಪ್ರದಾಯಿಕ ದರ್ಬಾರ್ ನಡೆಸಲಿದ್ದಾರೆ.
ನಂತರ ಶ್ರೀಪಾದರು ಕೃಷ್ಣಮಠಕ್ಕೆ ತೆರಳಿ ಕೃಷ್ಣನ ಪ್ರಥಮ ಪೂಜೆಯನ್ನು ನೆರವೇರಿಸಿ ತಮ್ಮ ಪರ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸುತ್ತಾರೆ.ಉಡುಪಿಯಲ್ಲಿ ರಾತ್ರಿ ಹಗಲಾಗಿತ್ತು...ಬುಧವಾರ ರಾತ್ರಿಯಿಡೀ ಉಡುಪಿನಗರದಲ್ಲಿ ಕತ್ತಲೆಯೇ ಆಗರಲಿಲ್ಲ. ನಗರದಾದ್ಯಂತ ಎಲ್ಲಿ ನೋಡಿದರೂ ಜನರೇ ಜನರು, ಎಲ್ಲಾ ರಸ್ತೆಗಳು ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಪ್ರತಿ ಮನೆಯನ್ನು ತೋರಣಗಳಿಂದ ಸಿಂಗರಿಸಲಾಗಿತ್ತು. ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ಹಾಕಲಾದ ಭವ್ಯ ವೇದಿಕೆಗಳಲ್ಲಿ ಭಕ್ತಿಗೀತೆ, ಸಿನಿಮಾ ಹಾಡು, ನೃತ್ಯ, ಯಕ್ಷಗಾನ ಇತ್ಯಾದಿಗಳು ಆಯಾ ಆಸಕ್ತರಿಗೆ ಮನರಂಜನೆ ನೀಡುತ್ತಿದ್ದವು.