ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದಂಗವಾಗಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮಿನ ಜನರ ನಡುವೆ ಮಾರಾಮಾರಿ ನಡೆದಿದೆ

ಹಾನಗಲ್ಲ : ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದಂಗವಾಗಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮಿನ ಜನರ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರ ಕೈ ಕಡಿಯಲಾಗಿದೆ. ಒಟ್ಟು 8 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

ಕಾರಹುಣ್ಣಿಮೆ ಅಂಗವಾಗಿ ಹೋರಿ ಓಡಿಸುವ ಕಾರ್ಯಕ್ರಮ

ಕಾರಹುಣ್ಣಿಮೆ ಅಂಗವಾಗಿ ನರೇಗಲ್ಲ ಗ್ರಾಮದಲ್ಲಿ ಪ್ರತಿ ವರ್ಷದಂತೆ ಸೋಮವಾರವೂ ಹೋರಿ ಓಡಿಸುವ ಕಾರ್ಯಕ್ರಮವಿತ್ತು. ಅದರಂತೆ ಮಧ್ಯಾಹ್ನ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬುವರು ‘ನಮ್ಮ ಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಾ’ ಎಂದು ಪ್ರಶ್ನಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಹೋರಿ ಹಿಂದೆ ಬಂದಿದ್ದ ಲೋಹಿತ್ ಜಯಪ್ಪ ಎಂಬುವರನ್ನು ಅನ್ಯಕೋಮಿನವರು ಥಳಿಸಿದರು. ಇದರಿಂದ ರೊಚ್ಚಿಗೆದ್ದ ಹಿಂದೂ ಯುವಕರ ಗುಂಪು ಕುಡುಗೋಲು ಮತ್ತಿತರ ಆಯುಧಗಳಿಂದ ಪ್ರತಿದಾಳಿ ನಡೆಸಿತು.

ಗಂಭೀರವಾಗಿ ಗಾಯ

ಘರ್ಷಣೆಯಲ್ಲಿ ಶಿವರಾಜ್ ಕುರುಬರ (27), ನಾಗಪ್ಪ ಹನುಮಂತಪ್ಪ ಕುರುಬರ (34), ಮಲ್ಲಪ್ಪ ರಾಯಪ್ಪ ಕೊಡಸಂಗಿ (30), ನಿಂಗರಾಜ ಮಹಾಂತೇಶ ಕುರುಬರ (30), ಜಯಪ್ಪ ಸಂಗಪ್ಪ ಕುರುಬರ (20), ಲೋಹಿತ ರೇವಣಪ್ಪ ಕುರುಬರ (24), ಬಾಷಾಸಾಬ ಗೌಂಡಿ (55), ಖಾಜಾ ಗೌಂಡಿ (18) ಎಂಬುವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವರಾಜ ಕುರುಬರ, ಜಯಪ್ಪ ಕುರುಬರ ಹಾಗೂ ಲೋಹಿತ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಕೈ ಕಡಿಯಲಾಗಿದೆ. ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಿಂದಾಗಿ ನರೇಗಲ್ಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.