ಪುತ್ತೂರು: ದೇಶದಲ್ಲಿ ಅಸಮಾನತೆ, ಜಾತಿ ಪದ್ಧತಿ ವಿಜೃಂಬಿಸುತ್ತಿದ್ದ ಕಾಲದಲ್ಲಿ ಸಮಾನತೆಯ ಸಿದ್ದಾಂತ ಜಗತ್ತಿಗೆ ಸಾರಿದ ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ಜಗತ್ತೇ ಒಪ್ಪಿಕೊಂಡಿತ್ತು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಕಲ್ಪನೆಯೊಂದಿಗೆ ಸಮಾಜದಲ್ಲಿ ನೊಂದವರ ಧ್ವನಿಯಾಗಿ, ಓರ್ವ ಯೋಗಿಯಾಗಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ದಾಂತ ಸಾರ್ವಕಾಲಿಕ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.ಅವರು ಶ್ರೀನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ನಾರಾಯಣ ಗುರು ಸ್ವಾಮಿ ಮಂದಿರ ಇದರ ಜಂಟಿ ಆಶ್ರಯದಲ್ಲಿ ಭಾನುವಾರ ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ 171ನೇ ವರ್ಷದ ಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಕಟ್ಟಕಡೇಯ ವ್ಯಕ್ತಿ ಕೂಡ ಶಿಕ್ಷಣವಂತನಾಗಬೇಕು, ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಆ ಮಹಾನ್ ವ್ಯಕ್ತಿಯನ್ನು ಅನುದಿನವೂ ನೆನೆಸುವುದು ಪ್ರತೀಯೊಬ್ಬರ ಕರ್ತವ್ಯವಾಗಿದೆ ಎಂದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಗೌರವ ಅಧ್ಯಕ್ಷ ಗೋಪಾಲಕೃಷ್ಙ ನೆಕ್ಕಿತ್ತಪುಣಿ ಉದ್ಘಾಟಿಸಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು. ಚಲನ ಚಿತ್ರ ನಿರ್ದೇಶಕ ಹಾಗೂ ಆಪ್ತ ಸಮಾಲೋಚಕ ಸ್ಮಿತೇಶ್ ಎಸ್. ಬಾರ್ಯ ಗುರು ಸಂದೇಶ ನೀಡಿದರು. ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಬಂಟ್ವಾಳ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಸಾಲ್ಯಾನ್ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ವಂದಿಸಿದರು. ಸಂತೋಷ್ ಕುಮಾರ್ ಮರಕ್ಕಡ ಮತ್ತು ದೇವಿಕಾ ಬನ್ನೂರು ನಿರೂಪಿಸಿದರು.